ಎನ್ಸಿಎಚ್ ನಿಮ್ಮ ಆಪತ್ಬಾಂಧವ
ಮೊಬೈಲ್ ರೀಚಾರ್ಜ್ ಮಾಡುವಾಗ ತಪ್ಪು ಸಂಖ್ಯೆಗೆ ಹಣ ಹೋಗಿದೆಯೇ? ಎಟಿಎಂನಿಂದ ಹಣ ಕಡಿತವಾಗಿ ನಗದು ಸಿಗಲಿಲ್ಲವೇ? ಆನ್ಲೈನ್ನಲ್ಲಿ ವಸ್ತು ಖರೀದಿಸಿ ಹಣ ಪಾವತಿಸಿದರೂ ವಸ್ತು ಕೈ ಸೇರಲಿಲ್ಲವೇ? ಇಂತಹ ಸಮಸ್ಯೆಗಳು ಬಹುತೇಕ ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ಬಾರಿ ಎದುರಾಗುತ್ತವೆ.
ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಜನರು ಕಸ್ಟಮರ್ ಕೇರ್ಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸುವುದರಲ್ಲೇ ತೃಪ್ತಿಪಡುತ್ತಾರೆ. ಕೆಲವರು ಹಣ ಕಳೆದುಕೊಂಡರೂ “ಇನ್ನು ಏನು ಮಾಡುವುದು?” ಎಂದು ಸುಮ್ಮನಾಗಿಬಿಡುತ್ತಾರೆ.
ಆದರೆ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಸರ್ಕಾರವೇ ಒಂದು ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸಿದೆ. ಅದೇ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline –NCH). ಗ್ರಾಹಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ಈ ಸೇವೆಯನ್ನು ಆರಂಭಿಸಿದೆ.
ಎನ್ಸಿಎಚ್ ಮೂಲಕ ಗ್ರಾಹಕರು ತಮ್ಮ ದೂರುಗಳನ್ನು ಸುಲಭವಾಗಿ ದಾಖಲಿಸಬಹುದು. ಮೊಬೈಲ್ ಸೇವೆಗಳು, ಬ್ಯಾಂಕಿಂಗ್, ಎಟಿಎಂ ವ್ಯವಹಾರಗಳು, ಇ-ಕಾಮರ್ಸ್, ಡಿಟಿಎಚ್, ವಿಮೆ, ಪ್ರವಾಸ ಸೇವೆಗಳು, ಇ-ವಾಲೆಟ್ಗಳು, ಆನ್ಲೈನ್ ಬುಕ್ಕಿಂಗ್, ಎಲೆಕ್ಟ್ರಾನಿಕ್ ಉತ್ಪನ್ನಗಳ ವಾರಂಟಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ದೂರುಗಳನ್ನು ಇಲ್ಲಿ ದಾಖಲಿಸಲು ಅವಕಾಶವಿದೆ.
ಗ್ರಾಹಕರು ತಮ್ಮ ಸಮಸ್ಯೆಯನ್ನು ಶುಲ್ಕರಹಿತ ಸಹಾಯವಾಣಿ ಸಂಖ್ಯೆಗಳಾದ 1800-11-4000 ಅಥವಾ 1915ಕ್ಕೆ ಕರೆ ಮಾಡಿ ತಿಳಿಸಬಹುದು. ದೂರು ದಾಖಲಾದ ಬಳಿಕ ಒಂದು ಡಾಕೆಟ್ ಸಂಖ್ಯೆ ನೀಡಲಾಗುತ್ತದೆ. ಮುಂದಿನ ಎಲ್ಲ ವಿಚಾರಣೆಗಳಿಗೆ ಇದೇ ಸಂಖ್ಯೆ ಆಧಾರವಾಗಿರುತ್ತದೆ.
ಕರೆ ಮಾಡಲು ಸಾಧ್ಯವಾಗದಿದ್ದರೆ 8800001915 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಬಹುದು. ಬಳಿಕ ಸಹಾಯವಾಣಿ ಸಿಬ್ಬಂದಿಯೇ ಗ್ರಾಹಕರನ್ನು ಸಂಪರ್ಕಿಸುತ್ತಾರೆ. ಮೊಬೈಲ್ ಆ್ಯಪ್ ಮೂಲಕವೂ ದೂರು ದಾಖಲಿಸುವ ವ್ಯವಸ್ಥೆ ಲಭ್ಯವಿದೆ.
ದೂರು ಸ್ವೀಕರಿಸಿದ ನಂತರ ಸಂಬಂಧಿತ ಕಂಪನಿ, ಸಂಸ್ಥೆ ಅಥವಾ ಸೇವಾ ಪೂರೈಕೆದಾರರಿಗೆ ಮಾಹಿತಿ ಕಳುಹಿಸಲಾಗುತ್ತದೆ. ಗ್ರಾಹಕರ ಸಮಸ್ಯೆಯನ್ನು ನ್ಯಾಯಯುತವಾಗಿ ಪರಿಹರಿಸಲು ಮಧ್ಯಸ್ಥಿಕೆ ಮತ್ತು ಸಮನ್ವಯದ ಮೂಲಕ ಪ್ರಯತ್ನಿಸಲಾಗುತ್ತದೆ. ಅನೇಕ ಪ್ರಕರಣಗಳು ಕೆಲವೇ ಗಂಟೆಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ಇತ್ಯರ್ಥಗೊಂಡ ಉದಾಹರಣೆಗಳಿವೆ.
ರೀಚಾರ್ಜ್ ಸಮಸ್ಯೆಗಳು, ಆನ್ಲೈನ್ ಖರೀದಿ ವಂಚನೆ, ಹಣ ಮರುಪಾವತಿ ವಿಳಂಬ, ಡಿಟಿಎಚ್ ಸೇವಾ ತೊಂದರೆ, ಬ್ಯಾಂಕಿಂಗ್ ವ್ಯವಹಾರಗಳ ಗೊಂದಲ, ಇ-ವಾಲೆಟ್ ಸಮಸ್ಯೆಗಳು ಸೇರಿದಂತೆ ನೂರಾರು ಪ್ರಕರಣಗಳು ಈ ವ್ಯವಸ್ಥೆಯ ಮೂಲಕ ಪರಿಹಾರ ಕಂಡುಕೊಂಡಿವೆ.
ಸಮಸ್ಯೆಗೆ ತೃಪ್ತಿಕರ ಪರಿಹಾರ ಸಿಗದಿದ್ದರೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವ ಅವಕಾಶವೂ ಇರುತ್ತದೆ. ಆದರೆ ಅದಕ್ಕೂ ಮುನ್ನ ಎನ್ಸಿಎಚ್ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸುವುದು ಹೆಚ್ಚು ಸುಲಭ ಮತ್ತು ಕಡಿಮೆ ವೆಚ್ಚದ ಮಾರ್ಗವಾಗಿದೆ.
ಯಾವುದೇ ದೂರು ದಾಖಲಿಸುವಾಗ ಬಿಲ್, ರಸೀದಿ, ವ್ಯವಹಾರದ ವಿವರ, ಸ್ಕ್ರೀನ್ಶಾಟ್ ಅಥವಾ ಸಂಬಂಧಿತ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ. ಇದರಿಂದ ಪ್ರಕರಣದ ಪರಿಶೀಲನೆ ಮತ್ತು ಪರಿಹಾರ ಪ್ರಕ್ರಿಯೆ ವೇಗವಾಗುತ್ತದೆ.
ಗ್ರಾಹಕರಾಗಿ ನಾವು ಹಣ ಪಾವತಿಸುವ ಪ್ರತಿಯೊಂದು ಸೇವೆಯ ಮೇಲೂ ಹಕ್ಕು ಹೊಂದಿದ್ದೇವೆ. ಆದ್ದರಿಂದ ಅನ್ಯಾಯವಾದಾಗ ಸುಮ್ಮನೆ ಕುಳಿತುಕೊಳ್ಳುವ ಬದಲು, ಲಭ್ಯವಿರುವ ಕಾನೂನುಬದ್ಧ ವ್ಯವಸ್ಥೆಗಳನ್ನು ಬಳಸಿಕೊಂಡು ನ್ಯಾಯ ಪಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ನಿಮ್ಮ ಹಕ್ಕುಗಳನ್ನು ಅರಿತುಕೊಳ್ಳಿ, ಅಗತ್ಯವಿದ್ದಾಗ ಧೈರ್ಯವಾಗಿ ದೂರು ದಾಖಲಿಸಿ ಮತ್ತು ಸೂಕ್ತ ಪರಿಹಾರ ಪಡೆಯಿರಿ.
ದೂರು ಸಲ್ಲಿಸಲು https://consumerhelpline.gov.in ಈ ವೆಬ್ಸೈಟ್ಗೆ ಭೇಟಿ ನೀಡಬಹುದು. ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ ದೂರು ಸಲ್ಲಿಸಬಹುದು.
ಈ ಮಾಹಿತಿ ಉಪಯುಕ್ತವೆನಿಸದರೆ ನಿಮ್ಮ ಆಪ್ತರೊಂದಿಗೂ ಹಂಚಿಕೊಳ್ಳಿ.