ವೈಕುಂಠದಲ್ಲಿ ಒಂದು ದಿನ ಶ್ರೀಮನ್ನಾರಾಯಣರು ಶೇಷಶಯ್ಯೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಪಕ್ಕದಲ್ಲಿ ಲಕ್ಷ್ಮೀದೇವಿ. ಎಲ್ಲವೂ ಪ್ರಶಾಂತ.
ಅಷ್ಟರಲ್ಲಿ “ನಾರಾಯಣ… ನಾರಾಯಣ…” ಎಂದು ನಾರದ ಮಹರ್ಷಿಗಳು ಓಡುತ್ತಾ ಬಂದರು.
“ಏನಾಯ್ತು ನಾರದರೇ? ಮತ್ತೆ ಭೂಲೋಕದಲ್ಲಿ ಯಾರಾದರೂ ಅಮೃತವನ್ನು ಹಂಚಿಕೊಳ್ಳುವ ವಿಚಾರಕ್ಕೆ ಜಗಳವಾಡುತ್ತಿದ್ದಾರಾ?” ಎಂದು ಮಹಾವಿಷ್ಣು ಕೇಳಿದರು.
“ಅದಕ್ಕಿಂತ ದೊಡ್ಡ ವಿಷಯ ಸ್ವಾಮಿ!” ಎಂದರು ನಾರದರು.
“ಕಲಿಯುಗದಲ್ಲಿ ಜನರು ಒಂದು ಕಟ್ಟೆಯ ವಿಷಯಕ್ಕೆ ಇಡೀ ಜಿಲ್ಲೆ, ರಾಜ್ಯ, ಸಾಮಾಜಿಕ ಜಾಲತಾಣ, ರಾಜಕೀಯ ಪಕ್ಷ, ಸಂಘಟನೆ ಎಲ್ಲವನ್ನೂ ಬಡಿದೆಬ್ಬಿಸಿದ್ದಾರೆ!”
ವಿಷ್ಣು ಕುಳಿತಲ್ಲೇ ನೇರವಾಗಿ ಎದ್ದು ಕುಳಿತರು.
“ಏನು ಹೇಳುತ್ತೀಯ? ಯಾವ ಕೋಟೆ? ಯಾವ ಅರಮನೆ?”
“ಅರಮನೆ ಅಲ್ಲ ಸ್ವಾಮಿ… ಕಟ್ಟೆ!”
“ಕಟ್ಟೆ?!”
“ಹೌದು ಸ್ವಾಮಿ. ಭಟ್ಕಳ ಎಂಬ ಊರಿನಲ್ಲಿ ಮುರಿನಕಟ್ಟೆ ಎಂಬ ಸ್ಥಳವಿದೆ. ಸ್ಥಳೀಯ ಜನರಿಗೆ ಅದು ಭಕ್ತಿಯ ಸಂಕೇತ. ಹೆದ್ದಾರಿ ಅಗಲೀಕರಣದ ವೇಳೆ ಅದರ ಜಾಗದ ಪ್ರಶ್ನೆ ಬಂತು. ಅಲ್ಲಿಂದ ಶುರುವಾಯಿತು ಮಹಾಭಾರತ!”
ವಿಷ್ಣು ಮುಗುಳ್ನಕ್ಕರು.
“ಅದರಲ್ಲಿ ಹೊಸದೇನಿದೆ? ಭಕ್ತಿಯ ವಿಷಯ ಬಂದಾಗ ಜನ ಭಾವುಕರಾಗುವುದು ಸಹಜ.”
“ಅದು ಸರಿ ಸ್ವಾಮಿ. ಆದರೆ ಮುಂದೆ ನಡೆದದ್ದನ್ನು ಕೇಳಿದರೆ ನೀವು ಕೂಡ ಗಾಬರಿಯಾಗುತ್ತೀರಿ.”
“ಹೇಳು.”
“ಮೊದಲು ಕೆಲವರು ಇದು ಸ್ಥಳೀಯ ಸಮಸ್ಯೆ ಎಂದರು. ನಂತರ ಕೆಲವರು ಇದು ಧರ್ಮದ ಪ್ರಶ್ನೆ ಎಂದರು. ಇನ್ನೂ ಕೆಲವರು ಸಂಸ್ಕೃತಿಯ ಪ್ರಶ್ನೆ ಎಂದರು. ನಂತರ ಸಾಮಾಜಿಕ ಜಾಲತಾಣಕ್ಕೆ ವಿಷಯ ಹೋಯಿತು. ಅಲ್ಲಿ ಪ್ರತಿಯೊಬ್ಬರೂ ತಾವೇ ತಜ್ಞರೆಂದು ಘೋಷಿಸಿಕೊಂಡರು.”
“ಅದು ಕಲಿಯುಗದ ಹುಲುಮಾನವರ ಸಾಮಾನ್ಯ ಲಕ್ಷಣ ನಾರದ. ಸಾಮಾಜಿಕ ಜಾಲತಾಣವನ್ನು ಯಾವುದಕ್ಕೆ, ಹೇಗೆ, ಎಷ್ಟು ಬಳಸಿಕೊಳ್ಳಬೇಕೆಂಬ ಬುದ್ಧಿಯಿಲ್ಲದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?”
“ಇನ್ನೂ ಇದೆ ಸ್ವಾಮಿ! ಕೆಲವರು ಘಟನೆ ನಡೆದ ಜಾಗಕ್ಕೇ ಹೋಗಿರಲಿಲ್ಲ. ಆದರೆ ವಿಡಿಯೊ ಮಾಡಿ ವಿವರಿಸಿದರು. ಕೆಲವರು ಇತಿಹಾಸ ಬರೆದರು. ಕೆಲವರು ಭವಿಷ್ಯವನ್ನೂ ಹೇಳಿದರು. ಕೆಲವರು ಭಟ್ಕಳದಲ್ಲೇ ಇರಲಿಲ್ಲ. ಆದರೂ ಹೆಚ್ಚು ಕಾಳಜಿ ತೋರಿಸಿದರು.”
ಲಕ್ಷ್ಮೀದೇವಿಗೆ ನಗು ತಡೆಯಲಾಗಲಿಲ್ಲ.
“ಮತ್ತೆ ರಾಜಕೀಯ?” ಎಂದು ಲಕ್ಷ್ಮೀದೇವಿ ಕೇಳಿದರು.
“ಅದನ್ನು ಕೇಳಬೇಡಿ ಅಮ್ಮ. ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಯಾವುದೂ ಹಿಂದೆ ಬೀಳಲಿಲ್ಲ. ಕೆಲವರಿಗೆ ಧರ್ಮ ಕಾಣಿಸಿತು. ಕೆಲವರಿಗೆ ಅಭಿವೃದ್ಧಿ ಕಾಣಿಸಿತು. ಕೆಲವರಿಗೆ ಮತದಾರರು ಕಾಣಿಸಿದರು. ಕೆಲವರಿಗೆ ಮುಂದಿನ ಚುನಾವಣೆ ಕಾಣಿಸಿತು.”
“ಹಾಗಾದರೆ ಕೊನೆಗೆ ಏನಾಯಿತು?” ವಿಷ್ಣು ಪ್ರಶ್ನಿಸಿದರು.
“ಅದೇ ವಿಶೇಷ ಸ್ವಾಮಿ. ಎಲ್ಲರೂ ಕೂಗಾಡಿದ ಮೇಲೆ ಮತ್ತೆ ಎಲ್ಲರೂ ಕೂತು ಮಾತನಾಡಿದರು!”
“ಅಂದರೆ?”
“ಆರಂಭದಲ್ಲೇ ಮಾಡಬೇಕಿದ್ದ ಕೆಲಸವನ್ನು ಕೊನೆಯಲ್ಲಿ ಮಾಡಿದರು. ಜಿಲ್ಲಾಡಳಿತ, ಸ್ಥಳೀಯ ಮುಖಂಡರು, ಸಮುದಾಯದ ಪ್ರತಿನಿಧಿಗಳು ಮಾತುಕತೆ ನಡೆಸಿದರು. ಪರ್ಯಾಯ ಜಾಗ ಗುರುತಿಸಿದರು. ಪರಿಹಾರ ಸಿಕ್ಕಿತು.”
ವಿಷ್ಣು ನಕ್ಕರು.
“ಹಾಗಾದರೆ ಮೊದಲೇ ಮಾತನಾಡಿದ್ದರೆ ಇಷ್ಟೊಂದು ಗಲಾಟೆ ಆಗುತ್ತಿರಲಿಲ್ಲವಲ್ಲ?”
“ಅದೇ ನಾನು ಕೂಡ ಯೋಚಿಸಿದೆ ಸ್ವಾಮಿ. ಆದರೆ ಹಾಗೆ ಮಾಡಿದರೆ ಸಾಮಾಜಿಕ ಜಾಲತಾಣಗಳಿಗೆ ಕೆಲಸ ಸಿಗುತ್ತಿರಲಿಲ್ಲ. ಯೂಟ್ಯೂಬ್ ಚರ್ಚೆಗಳು ನಡೆಯುತ್ತಿರಲಿಲ್ಲ. ವಾಟ್ಸಪ್ ವಿಶ್ವವಿದ್ಯಾಲಯಕ್ಕೆ ಪಾಠದ ವಿಷಯ ಸಿಗುತ್ತಿರಲಿಲ್ಲ. ಕೆಲವರ ರಾಜಕೀಯ ಭಾಷಣಗಳೂ ಮಿಸ್ ಆಗುತ್ತಿತ್ತು.”
ವೈಕುಂಠದಲ್ಲಿ ಕ್ಷಣಕಾಲ ಮೌನ ಆವರಿಸಿತು.
ನಂತರ ವಿಷ್ಣು ದೇವರು ನಿಧಾನವಾಗಿ ಹೇಳಿದರು:
“ನಾರದ, ಭೂಲೋಕದಲ್ಲಿ ಅಭಿವೃದ್ಧಿಯೂ ಬೇಕು, ಸಂಪ್ರದಾಯವೂ ಬೇಕು. ಆದರೆ ಅವೆರಡರ ನಡುವೆ ಸಂವಾದವೇ ಮುಖ್ಯ. ಜನರು ಮೊದಲು ಮಾತನಾಡಿದರೆ ವಿವಾದಗಳು ಸಣ್ಣದಾಗುತ್ತವೆ. ಮೊದಲು ಜಗಳವಾಡಿ ನಂತರ ಮಾತನಾಡಿದರೆ ವಿವಾದಗಳು ದೊಡ್ಡದಾಗುತ್ತವೆ.”
“ಹಾಗಾದರೆ ಈಗ ಭಟ್ಕಳದ ಜನರಿಗೆ ಏನು ಸಂದೇಶ ಕೊಡೋಣ ಸ್ವಾಮಿ?”
ವಿಷ್ಣು ಮಂದಹಾಸ ಬೀರಿದರು.
“ಮುರಿನಕಟ್ಟೆ ಉಳಿದಿದೆಯೋ ಇಲ್ಲವೋ ಎನ್ನುವುದಕ್ಕಿಂತ ಭಟ್ಕಳದ ಸಾಮರಸ್ಯ ಉಳಿಯಬೇಕು ಎಂದು ಹೇಳು.”
“ಇನ್ನೇನಾದರೂ?”
“ಹೌದು… ಹೇಳು, ಎಲ್ಲಾ ಮುಗೀತ್ ಬಿಡ್ರಿ!”
ಅಂತ ಹೇಳಿ ವಿಷ್ಣು ಮತ್ತೆ ಶೇಷಶಯ್ಯೆಯ ಮೇಲೆ ಮಲಗಿದರು.
ನಾರದರು “ನಾರಾಯಣ… ನಾರಾಯಣ…” ಎನ್ನುತ್ತಾ ಹೊರಟರು. ಆದರೆ ಭೂಲೋಕದ ಜನರು ಈ ಸಲ ನಾರದರಮಾತು ಕೇಳುತ್ತಾರೋ ಇಲ್ಲವೋ ಎಂಬುದು ಮಾತ್ರ ಅವರಿಗೆ ಇನ್ನೂ ಅನುಮಾನವಾಗಿಯೇ ಇತ್ತು!