ಕಾರವಾರ: ಆನ್‌ಲೈನ್ ಟ್ರೇಡಿಂಗ್ ಮೂಲಕ ಅಧಿಕ ಲಾಭದ ಆಮಿಷವೊಡ್ಡಿ ಅಂಕೋಲಾ ಮೂಲದ ಉದ್ಯಮಿಯೊಬ್ಬರಿಂದ 53.19 ಲಕ್ಷ ರೂ ವಂಚಿಸಿರುವ ಆರೋಪದಡಿ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಮಠಾಕೇರಿಯ ನಿವಾಸಿ ಕಮಲಾಕ್ಷ ಆಪಾ ಭಟ್ (52) ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಏಪ್ರಿಲ್ 1ರಂದು ಫೇಸ್‌ಬುಕ್ ಬಳಸುತ್ತಿದ್ದ ವೇಳೆ ಅವರಿಗೆ ಟ್ರೇಡಿಂಗ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಸಂದೇಶ ಬಂದಿತ್ತು. ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಗೂಗಲ್ ಫಾರ್ಮ್ ತೆರೆಯಲ್ಪಟ್ಟಿದ್ದು, ಅದರಲ್ಲಿ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ ನೋಂದಣಿ ಮಾಡಿಕೊಂಡಿದ್ದರು.
ಬಳಿಕ ನಿಖಿತಾ ಎಂಬ ಹೆಸರಿನ ಮಹಿಳೆ ಕರೆ ಮಾಡಿ ಟ್ರೇಡಿಂಗ್ ಕಂಪನಿಯಲ್ಲಿ ಖಾತೆ ತೆರೆದಿರುವುದಾಗಿ ತಿಳಿಸಿದ್ದಾಳೆ. ನಂತರ ಟೆಲಿಗ್ರಾಂ ಮೂಲಕ ಸಂಪರ್ಕಿಸಿದ ಸೈಯದ್ ಎಂಬಾತ ತಾನು ಕಂಪನಿಯ ಅಕೌಂಟ್ ಮ್ಯಾನೇಜರ್ ಎಂದು ಹೇಳಿ ಟ್ರೇಡಿಂಗ್ ಕುರಿತು ಮಾರ್ಗದರ್ಶನ ನೀಡುವುದಾಗಿ ನಂಬಿಸಿದ್ದಾನೆ.
ಆತ ಸೂಚಿಸಿದ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳಿಗೆ ಹಣ ಜಮಾ ಮಾಡುವಂತೆ ಹೇಳಿದ್ದಾನೆ.
ಆರಂಭದಲ್ಲಿ ₹19,908 ಹೂಡಿಕೆ ಮಾಡಿದ ಬಳಿಕ ಟ್ರೇಡಿಂಗ್ ಆ್ಯಪ್‌ನಲ್ಲಿ ಹೂಡಿಕೆ ಮೊತ್ತ ಹಾಗೂ ಲಾಭ ಹೆಚ್ಚುತ್ತಿರುವಂತೆ ತೋರಿಸಲಾಗಿತ್ತು. ನಂತರ ಅಶುತೋಷ್ ಎಂಬ ಮತ್ತೊಬ್ಬ ವ್ಯಕ್ತಿ ಸಂಪರ್ಕಿಸಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿದ್ದಾನೆ.
ಇದನ್ನು ನಂಬಿದ ಕಮಲಾಕ್ಷ ಭಟ್ ಏಪ್ರಿಲ್ 3ರಿಂದ ಮೇ 18ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹53,19,908 ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ಮೊತ್ತ ಅಥವಾ ಲಾಭಾಂಶ ಯಾವುದೂ ವಾಪಸ್ ದೊರೆಯದೇ ತಾವು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.