ಆಯಾ ತಾಲೂಕಿನವರು ಈ ಸಂಖ್ಯೆಗಳನ್ನು ಸೇವ್ ಮಾಡಿಕೊಂಡಿರಿ!
ಕಾರವಾರ: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮುನ್ಸೂಚನೆಯ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 4 ಮತ್ತು 5ರಂದು ಮಧ್ಯಮ ಪ್ರಮಾಣದ ಮಳೆ ಹಾಗೂ ಜೂನ್ 6ರಿಂದ 10ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸಿದ್ಧತೆಗಳನ್ನು ಕೈಗೊಂಡಿದೆ.
ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ಒಟ್ಟು 294 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿ ಕಾಳಜಿ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ಜಿಲ್ಲೆಯಲ್ಲಿ 439 ಭೂಕುಸಿತ ಸಂಭವನೀಯ ಸ್ಥಳಗಳನ್ನು ಗುರುತಿಸಿದ್ದು, ಅವುಗಳ ನಿರಂತರ ಮೇಲ್ವಿಚಾರಣೆಗಾಗಿ ಸ್ಪಾಟರ್ಗಳನ್ನು (Spotters) ನೇಮಕ ಮಾಡಲಾಗಿದೆ. ಅವರಿಗೆ ಅಗತ್ಯ ತರಬೇತಿ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಇತರೆ ಸರ್ಕಾರಿ ಕಟ್ಟಡಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಸಂಬಂಧಿತ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
ಬಿಎಸ್ಎನ್ಎಲ್ ಮತ್ತು ಹೆಸ್ಕಾಂ ಇಲಾಖೆಗಳು ಮಳೆಗಾಲದಲ್ಲಿ ಎದುರಾಗಬಹುದಾದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡಿದ್ದು, ಬದಲಿ ವ್ಯವಸ್ಥೆಗಳೊಂದಿಗೆ ಸಜ್ಜಾಗಿವೆ.
ಸಾರ್ವಜನಿಕರು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಡೆಸುವ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಕಾಲಕಾಲಕ್ಕೆ ನೀಡಲಾಗುವ ಹವಾಮಾನ ಮುನ್ಸೂಚನೆಗಳನ್ನು ಗಮನಿಸಿ, ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ತುರ್ತು ಕಾರ್ಯಾಚರಣೆ ಕೇಂದ್ರ (DEOC) 24×7 ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಯಾವುದೇ ತುರ್ತು ಪರಿಸ್ಥಿತಿ ಅಥವಾ ಸಮಸ್ಯೆಗಳ ಕುರಿತು ಸಂಬಂಧಿತ ತಾಲೂಕು ಅಥವಾ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಬಹುದು. ದೂರು ಅಥವಾ ಮಾಹಿತಿ ಬಂದ ತಕ್ಷಣ ತುರ್ತು ಸ್ಪಂದನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಸಂಪರ್ಕ ಸಂಖ್ಯೆಗಳು:
ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ (DEOC):
- ದೂರವಾಣಿ: 08382-229857
- ಮೊಬೈಲ್: 9483511015
ಪೊಲೀಸ್ ಕಂಟ್ರೋಲ್ ರೂಂ:
- 08382-226550
- 9480805200
ತಾಲೂಕು ಕಂಟ್ರೋಲ್ ರೂಂಗಳು:
- ಕಾರವಾರ: 08382-223350
- ಅಂಕೋಲಾ: 08388-230243
- ಕುಮಟಾ: 08386-222054
- ಹೊನ್ನಾವರ: 08387-220262
- ಭಟ್ಕಳ: 08385-226422
- ಶಿರಸಿ: 9448769569
- ಸಿದ್ದಾಪುರ: 08389-230127
- ಯಲ್ಲಾಪುರ: 9902571927
- ಮುಂಡಗೋಡ: 08301-222122
- ಹಳಿಯಾಳ: 08284-220134
- ಜೋಯಿಡಾ: 8310703169
- ದಾಂಡೇಲಿ: 08284-295959
ಜಿಲ್ಲಾಡಳಿತವು ಮುಂಗಾರು ಅವಧಿಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದೆ.