Monday, September 7, 2026
Join WhatsApp Group
HomeInformationಮೊಬೈಲ್‌ ಕ್ಯಾಮೆರಾದೆದುರು ಬೆತ್ತಲಾದೀರಿ ಜೋಕೆ!

ಮೊಬೈಲ್‌ ಕ್ಯಾಮೆರಾದೆದುರು ಬೆತ್ತಲಾದೀರಿ ಜೋಕೆ!

ಅಂತಿಂಥದಲ್ಲ ಈ ಹನಿ ಟ್ರಾಪಿಂಗ್!

ಮಾನವ ಕುಲದಲ್ಲಿಯೇ ಅತಿಹೆಚ್ಚು ಮೋಹ, ದಾಹಗಳನ್ನು ಹೊಂದಿ ಪ್ರತಿಯೊಬ್ಬ ಮನುಷ್ಯನನ್ನೂ ತನ್ನತ್ತ ಸೆಳೆದು ವಿನಾಶದ ದಾರಿ ತೋರಿಸುವದು ಹೆಣ್ಣು, ಹೊನ್ನು ಮತ್ತು ಮಣ್ಣು ಎಂಬುದು ಈಗಿನ ಮಾತಲ್ಲ. ಅನಾದಿ ಕಾಲದಿಂದಲೂ ಸಾಗಿಬಂದ ದಾರಿ ಇದೇ.

ಒಬ್ಬೊಬ್ಬರಿಗೆ ಒಂದೊಂದು ಮೋಹ. ಗಂಡಿಗೆ ಹೆಣ್ಣಿನ ಮೋಹ, ಹೆಣ್ಣಿಗೆ ಹೊನ್ನಿನ ಮೋಹ ಸಮತೂಕದ ಭಾಗವಾಗಿ ಮಣ್ಣಿನ ಮೋಹ! ಈ ಮೋಹಗಳು ಸಹಜವಾಗಿಯೇ ಇರುವ ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ. ಬೀದಿ ಬೀದಿ ಅಲೆಯುವಂತೆ ಮಾಡುತ್ತದೆ. ಕೊನೆಯದಾಗಿ ಮಣ್ಣಲ್ಲಿ ಕರಗಿಹೋಗುವಂತೆಯೂ ಅನುಗ್ರಹಿಸುತ್ತದೆ.

ಕಾಲ ಬದಲಾಗಿದೆ. ತಂತ್ರಜ್ಞಾನವೂ ಕೂಡ. ಇಂದಿನ ತಂತ್ರಜ್ಞಾನ ಯುಗದಲ್ಲಿ ಹನಿ ಟ್ರಾಪ್ ಇನ್ನಷ್ಟು ಅಪಾಯಕಾರಿ ರೂಪ ಪಡೆದುಕೊಂಡಿದೆ. ಉಂಗುರ, ಲಾಕೆಟ್, ಕೈಗಡಿಯಾರ ಅಥವಾ ಬಟ್ಟೆಯ ಗುಂಡಿಯಷ್ಟೇ ಚಿಕ್ಕ ಗಾತ್ರದ ಹಿಡನ್ ಕ್ಯಾಮೆರಾಗಳು ಲಭ್ಯವಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು, ವಿಡಿಯೊ ಕರೆಗಳ ಮೂಲಕ ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಹಣ ಸುಲಿಯುವ ಜಾಲಗಳು ದೇಶದಾದ್ಯಂತ ಸಕ್ರಿಯವಾಗಿವೆ.

ಮನುಷ್ಯ ಸಹಜ ದೌರ್ಬಲ್ಯ ನೋಡಿ. ನರಮಾನವನ ಹೊರತಾಗಿ ಬೇರೆ ಯಾವುದೇ ಜೀವಜಂತುಗಳಿಗೆ ಲೈಂಗಿಕತೆಯೆಂಬುದು ಕೇವಲ ತನ್ನ ಸಂತತಿಯನ್ನು ಮುಂದುವರಿಸುವ ಉದ್ದೇಶಕ್ಕೆ ಮಾತ್ರ ಸೀಮಿತ. ಆದರೆ, ಮನುಷ್ಯನಿಗೆ ಹಾಗಲ್ಲ. ಅದೊಂದು ಚಟ. ಆಟ, ಸಿಕ್ಕಿಲ್ಲವೆಂದರೆ ಬೇಕೇಬೇಕೆಂಬ ಹಠ.

ವಯಸ್ಸು ಅರವತ್ತಾದರೂ ತೀರದ ದಾಹ. ಈ ಹನಿಟ್ರಾಪ್‌ನಲ್ಲಿಯೂ ಒಂದಿಷ್ಟು ವಿಧಗಳನ್ನು ಗುರುತಿಸಬಹುದು. ಕೇವಲ ಹಣವನ್ನು ಪೀಕುವ ಉದ್ದೇಶಕ್ಕಲ್ಲದೆ ಆಮೂಲಕ ಬೇರಾವುದೋ ಮೌಲ್ಯಯುತ ದಾಖಲೆಗಳನ್ನು ಸಂಗ್ರಹಿಸುವದು, ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸುವದು, ರಹಸ್ಯ ಮಾಹಿತಿಗಳನ್ನು ಸಂಗ್ರಹಿಸುವದು ಇತ್ಯಾದಿಗಳದ್ದು ಒಂದು ಭಾಗವಾದರೆ, ಒಳ್ಳೆಯ `ಸೌಂಡ್ ಪಾರ್ಟಿ’ ಆಸಾಮಿಯನ್ನು ಬಲೆಗೆ ಬೀಳಿಸಿ ಎಷ್ಟು ಸಾಧ್ಯವೋ ಅಷ್ಟು ಹಣ ಕೀಳುವದು ಇನ್ನೊಂದು ಭಾಗ. ಮರ್ಯಾದೆಗಂಜುವ ಜನರನ್ನೇ ಇಂಥ ಬಲೆಗೆ ಬೀಳಿಸುವದೂ ಅಂಥ ದಂಧೆ ನಡೆಸುವವರಿಗೊಲಿದ ಕಲೆಯಷ್ಟೇ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರ ಬುಡಕ್ಕೂ ಈ ಹನೀಟ್ರಾಪ್ ಹರಡತೊಡಗಿದೆ. ಕೆಲವೇ ಕೆಲವು ಪ್ರಕರಣಗಳು ದಾಖಲಾಗುತ್ತಿವೆಯಷ್ಟೇ. ಅದರ ನೂರಿನ್ನೂರು ಪಟ್ಟು ಹೆಚ್ಚು ಪ್ರಕರಣಗಳು ಬ್ಯಾಂಕ್ ಖಾತೆ ಖಾಲಿಯಾಗುವ ಮೂಲಕ ಅಲ್ಲಿಂದಲ್ಲಿಗೆ ಮುಸುಕುಹಾಕಿಕೊಂಡಿವೆ!

ಫೇಸ್‌ಬುಕ್‌ನಂಥಹ ಸಾಮಾಜಿಕ ಜಾಲತಾಣಗಳೇ ಈ ಹನಿಗಳಿಗೆ ಟ್ರಾಪ್ ಬೀಸಲು ಸಿಕ್ಕಿರುವ ದೊಡ್ಡ ಸಮುದ್ರ. ಒಂದು ತಂಡ ಇಂಥ ಆಸಾಮಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರೆ, ಕುಳಿತಲ್ಲಿಯೇ ಹುಡುಗಿ ಹಾಸಿಗೆಯನ್ನು ಓರಣಗೊಳಿಸಿಬಿಡುತ್ತಾಳೆ. ವಾಟ್ಸಪ್ ನಂಬರ್ ಸಿಗುತ್ತಿದ್ದಂತೆ ಶುರುವಾಗುತ್ತದೆ ವಿಡಿಯೋ ಚಾಟಿಂಗ್. ಕೆಲ ಪುರುಷರು ಒಂದೆರಡು ತಾಸಿನಲ್ಲಿಯೇ ಕಾಲ್‌ನಲ್ಲಿ ಕ್ಯಾಮೆರಾ ಮುಂದೆ ಬೆತ್ತಲಾಗಿಬಿಡುತ್ತಾರೆ.

ಇನ್ನೂ ಕೆಲವರು ತುಸು ಗಟ್ಟಿಗರು. ಒಂದು ತಿಂಗಳವರೆಗೂ ಸಮಯ ಬೇಕು. ಸ್ವಲ್ಪ ಅನುಮಾನವಿದ್ದವರು ಯಾವ ಕಾರಣಕ್ಕೂ ಬೆತ್ತಲಾಗುವದಿಲ್ಲ. ಆದರೆ ವಿಡಿಯೋ ಎಡಿಟಿಂಗ್ ಸಹಾಯದಿಂದ ಅಥವರನ್ನು ನಾವೇ ಬೆತ್ತಲಾಗಿಸುವದು ಅನಿವಾರ್ಯ ಎಂದು ಈ ಹಿಂದೆ ಮುಂಬೈನಲ್ಲಿ ಸಿಕ್ಕಿಬಿದ್ದ ತಂಡವೊಂದು ಅವರ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಬಾಯಿಬಿಟ್ಟಿತ್ತು.

ಜನಸಾಮಾನ್ಯರಾದ ನಾವು ಇಂಥ ಬಲೆಗೆ ಬಿದ್ದಮೇಲೆ ಏನು ಮಾಡೋದು ಎನ್ನುವದಕ್ಕಿಂತ ಬೀಳದಿರುವದು ಹೇಗೆ ಎಂಬುದರ ಕಲ್ಪನೆಯಿರಲಿ. ಹನಿಟ್ರಾಪ್ ಮೂಲಕ ಬ್ಲಾಕ್ಮೇಲ್ ಮಾಡಿ ಹಣ ಸುಲಿಯುವಷ್ಟು ನನ್ನಲ್ಲಿ ಆಸ್ತಿಯಿಲ್ಲ ಎನ್ನಬೇಡಿ. ಇಂಥವರಿಗೆ ದೋಚಲು ಇದ್ದಷ್ಟೇ ಸಂಪತ್ತು ಸಾಕು. ಸಂಪತ್ತಿನಲ್ಲಿ ಕುಚೇಲನೇ ಆಗಿದ್ದರು ಅಂಥವರನ್ನೂ ಗಾಳದಲ್ಲಿ ಸಿಕ್ಕಿಸಿ ಬರಿಯ ಲಂಗೋಟಿಯಲ್ಲಿ ನಿಲ್ಲಿಸಬಲ್ಲರು.

* ಫೇಸ್‌ಬುಕ್ ಅಥವಾ ಬೇರಾವುದೇ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರಿಕೆವಹಿಸಿದರೆ ಬಚಾವಾಗಬಹುದು. ಅಪರಿಚಿತರ ಸ್ನೇಹಹಸ್ತಕ್ಕೆ ಕೈಚಾಚಬೇಡಿ. ಅಂಥ ರಿಕ್ವೆಸ್ಟ್ಗಳು ಬಂದರೆ ಆಗಿಂದಾಗ್ಗೆ ಡಿಲೀಟ್ ಮಾಡಿಬಿಡಿ. ಅನಗತ್ಯ ರಿಕ್ವೆಸ್ಟ್‌ಗಳಿಗೆ ಉದಾಸೀನವೇ ಮದ್ದು.

* ವಾಟ್ಸಪ್ ಅಥವಾ ಇನ್ನಾವುದೇ ಸೋಶಿಯಲ್ ಮಿಡಿಯಾಗಳಲ್ಲಿ ಅಪರಿಚಿತ ಸಂಖ್ಯೆ ಅಥವಾ ಖಾತೆಗಳಿಂದ ವಿಡಿಯೋ ಕಾಲ್ ಬಂದರೂ ಅಷ್ಟೇ. ನಿರ್ಲಕ್ಷಿಸುವದೇ ಒಳ್ಳೆಯದು. ಮಾತನಾಡಲೇಬೇಕೆನಿಸಿದರೆ ಸಂತೆಯಲ್ಲೋ, ಮಾರ್ಕೆಟ್ ಮಧ್ಯದಲ್ಲಿಯೇ ನಿಂತು ಮಾತನಾಡಿ. ಹೊರತಾಗಿ ಖಾಸಗಿ ರೂಮಿನಲ್ಲಿ ಕುಳಿತಲ್ಲ! ಪದೇ ಪದೇ ಅಂಥ ಅಪರಿಚಿತ ಸಂಖ್ಯೆಗಳಿಂದ ವಿಡಿಯೋ ಕಾಲ್ ಬರುತ್ತಲೇ ಇದ್ದರೆ ಬ್ಲಾಕ್/ರಿಪೋರ್ಟ್ ಮಾಡಿ ನಿರಾಳವಾಗಿಬಿಡಿ.

* ಹಿಂದಿನ ವಾರ ಇದೇ ಪುಟದ ಲೇಖನದಲ್ಲಿ ತಿಳಿಸಿದಂತೆ, ಹಿಡನ್ ಅಪ್ಲಿಕೇಶನ್‌ಗಳೂ ಇಂಥ ತಂಡಗಳಿಗೆ ಸಹಕಾರಿಯಾಗುತ್ತವೆ. ಕೊನೆಯ ಗಾಳವಾಗಿ ಅಂಥವುಗಳ ಮೂಲಕ ನಿಮ್ಮ ಖಾಸಗೀ ಕ್ಷಣಗಳನ್ನು ಸೆರೆಹಿಡಿದು ನಿಮ್ಮನ್ನು ಬ್ಲಾಕ್‌ಮೇಲ್ ಮಾಡುವ ಸಾಧ್ಯತೆಗಳೂ ಇಲ್ಲದಿಲ್ಲ. ಒಂದೆಡೆ ಹಿಡನ್ ಕ್ಯಾಮೆರಾಗಳಾದರೆ, ನಮ್ಮ ಅನುಮತಿಯನ್ನೂ ಪಡೆಯದೇ ನಮ್ಮ ಕ್ಯಾಮೆರಾಗಳನ್ನು ನಿಯಂತ್ರಿಸಬಲ್ಲ ಹಿಡನ್ ಅಪ್ಲಿಕೇಶನ್‌ಗಳೂ ಇವೆ!

* ಅಶ್ಲೀಲವೆನಿಸುವಂತ ಯಾವ ವಿಷಯ, ಫೋಟೋ, ವಿಡಿಯೋಗಳನ್ನು ಯುಟ್ಯೂಬ್ ಅಥವಾ ಬೇರಾವ ಸೈಟ್‌ಗಳಲ್ಲೂ ಹುಡುಕಿ ಡೌಲ್‌ನೋಡ್ ಮಾಡಬೇಡಿ. ಡೇಟಿಂಗ್‌ಗಾಗಿಯೇ ಹಲವು ಸೈಟ್‌ಗಳು ಹುಟ್ಟಿಕೊಂಡಿವೆ. ಆತುರಬಿದ್ದು ಇಂಥವುಗಳಲ್ಲಿ ಖಾತೆ ತೆರೆದರೂ ಅಷ್ಟೇ. ಹಾಗೆ ಮಾಡಿದ್ದೇ ಹೌದಾದರೆ, ನಿಮ್ಮ ಆಸಕ್ತಿ, ಆಕಾಂಕ್ಷೆ, ಚಪಲ ಎಲ್ಲವನ್ನೂ ತಿಳಿದುಕೊಂಡ ಮೊಬೈಲ್ ಪರದೆಯ ಹಿಂದೆ ಕುಳಿತ ಮುಖವಾಡದ ಮನುಷ್ಯ ಕುಳಿತಲ್ಲೇ ನಗುತ್ತಾನೆ ಮತ್ತು ತನ್ನ ಬ್ಯಾಂಕ್ ಖಾತೆ ತುಂಬಿಸಿಕೊಳ್ಳಲು ಎದುರುನೋಡುತ್ತಿರುತ್ತಾನೆ. ಹನಿ ಟ್ರಾಪ್‌ನ ಆ ಬಲಿ ನೀವೇ ಆಗಿರಬಹುದು!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share