Monday, September 7, 2026
Join WhatsApp Group
HomeUncategorizedಮಹಿಳಾ ಸುರಕ್ಷತೆಗೆ ‘ಪಿಂಕ್ ಬಬಲ್’ ಮಹತ್ವದ ಹೆಜ್ಜೆ: ಕಾಗೇರಿ

ಮಹಿಳಾ ಸುರಕ್ಷತೆಗೆ ‘ಪಿಂಕ್ ಬಬಲ್’ ಮಹತ್ವದ ಹೆಜ್ಜೆ: ಕಾಗೇರಿ

ಕಾರವಾರ ರೈಲು ನಿಲ್ದಾಣದಲ್ಲಿ ಮಹಿಳೆಯರಿಗಾಗಿ ವಿಶೇಷ ಆಸನ ವ್ಯವಸ್ಥೆ ಉದ್ಘಾಟನೆ

ಕಾರವಾರ: ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಕಾರವಾರ ರೈಲು ನಿಲ್ದಾಣದಲ್ಲಿ ಮಹಿಳೆಯರಿಗಾಗಿ ನಿರ್ಮಿಸಲಾಗಿರುವ ‘ಪಿಂಕ್ ಬಬಲ್’ (Pink Bubble) ವಿಶ್ರಾಂತಿ ಆಸನ ವ್ಯವಸ್ಥೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಗುರುವಾರ ಕಾರವಾರ ರೈಲು ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಪಿಂಕ್ ಬಬಲ್ ಆಸನ ವ್ಯವಸ್ಥೆಯನ್ನು ಉದ್ಘಾಟಿಸಿ, ಮಡಗಾಂವ್–ಕಾರವಾರ ಖಾಯಂ ರೈಲು ಸೇವೆಯನ್ನು ಸ್ವಾಗತಿಸಿ ಅವರು ಮಾತನಾಡಿದರು.

ಮಹಿಳೆಯರು ರೈಲು ಬರುವವರೆಗೆ ಸುರಕ್ಷಿತ ಹಾಗೂ ಸುಸಜ್ಜಿತ ವಾತಾವರಣದಲ್ಲಿ ನಿರಾಳವಾಗಿ ಕಾಯಲು ಅನುಕೂಲವಾಗುವಂತೆ ಕಾರವಾರ ರೋಟರಿ ಕ್ಲಬ್ ಸುಮಾರು ₹1 ಲಕ್ಷ ವೆಚ್ಚದಲ್ಲಿ ಈ ವ್ಯವಸ್ಥೆ ನಿರ್ಮಿಸಿದೆ. ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಮಹಿಳೆಯರಿಗೆ ತೊಂದರೆ ನೀಡುವವರ ವಿರುದ್ಧ ರೈಲ್ವೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಮಡಗಾಂವ್-ಕಾರವಾರ ನಡುವೆ ತಾತ್ಕಾಲಿಕ ಶಟಲ್ ರೈಲಾಗಿ ಸಂಚರಿಸುತ್ತಿದ್ದ ಸೇವೆಯನ್ನು ಕೇಂದ್ರ ಸರ್ಕಾರ ಖಾಯಂಗೊಳಿಸಿರುವುದು ಕರಾವಳಿ ಭಾಗದ ಜನತೆಗೆ ಮಹತ್ವದ ಅನುಕೂಲವಾಗಿದೆ. ಮಡಗಾಂವ್‌ನಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದು, ಇದರಿಂದ ಉದ್ಯೋಗಿಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ನೆರವಾಗಲಿದೆ ಎಂದು ಹೇಳಿದರು.

ಕಾರವಾರ ರೈಲು ನಿಲ್ದಾಣದ ಮೀಸಲು ಕೊಠಡಿಯನ್ನು ಮೇಲ್ದರ್ಜೆಗೆ ಏರಿಸಿ ಎಸಿ ಸೌಲಭ್ಯ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಜೊತೆಗೆ ರೈಲು ನಿಲ್ದಾಣದ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗುವುದು ಎಂದರು.

ಜಿಲ್ಲೆಯ ರೈಲ್ವೆ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ದಾಂಡೇಲಿ–ಆಳ್ನಾವರ ರೈಲು ಸೇವೆ ಆರಂಭಗೊಂಡಿದ್ದು, ತಾಳಗುಪ್ಪ–ಸಿದ್ದಾಪುರ–ಶಿರಸಿ–ಕುಮಟಾ ಹಾಗೂ ಮುಂಡಗೋಡ–ತಡಸ–ಹುಬ್ಬಳ್ಳಿ ಮಾರ್ಗಗಳ ಸಮೀಕ್ಷೆ ಪೂರ್ಣಗೊಂಡಿದೆ. ಅಂಕೋಲಾ–ಹುಬ್ಬಳ್ಳಿ ಮತ್ತು ತಾಳಗುಪ್ಪ–ಹೊನ್ನಾವರ ರೈಲು ಮಾರ್ಗಗಳಿಗೂ ಮುಂದಿನ ದಿನಗಳಲ್ಲಿ ಒತ್ತು ನೀಡಲಾಗುವುದು ಎಂದು ಹೇಳಿದರು.

ಕೊಂಕಣ ರೈಲ್ವೆಯ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರದಿಂದ ಸುಮಾರು ₹7 ಸಾವಿರ ಕೋಟಿ ಅನುದಾನ ತರುವ ಪ್ರಯತ್ನ ನಡೆಯುತ್ತಿದ್ದು, ಈ ಅನುದಾನದ ಮೂಲಕ ಮೂಲಸೌಕರ್ಯ ವಿಸ್ತರಣೆ, ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ ಹಾಗೂ ವಿವಿಧ ಸುಧಾರಣಾ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆ ಇದೆ ಎಂದು ಕಾಗೇರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆಯ ಪ್ರಧಾನ ಮುಖ್ಯ ಇಂಜಿನಿಯರ್ ಎಲ್. ಪ್ರಕಾಶ್, ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಪಿ. ಚಿತ್ರಸೇನ್, ವಿಭಾಗೀಯ ಸಂಕೇತ ಮತ್ತು ದೂರಸಂಪರ್ಕ ಇಂಜಿನಿಯರ್ ಸುದರ್ಶನ್ ರೆಡ್ಡಿ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಜಿ.ಡಿ. ಮೀನಾ, ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಸುಧಾ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಶ್ರವಣಕುಮಾರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಲ್ಲಾಭಕ್ಷ್‌, ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share