Sunday, September 6, 2026
Join WhatsApp Group
HomeLocal Newsಗಂಗಾವಳಿ ನದಿಯ ಮಣ್ಣಿನ ದಿಬ್ಬ ತೆರವು ಕಾಮಗಾರಿಗೆ ಚಾಲನೆ

ಗಂಗಾವಳಿ ನದಿಯ ಮಣ್ಣಿನ ದಿಬ್ಬ ತೆರವು ಕಾಮಗಾರಿಗೆ ಚಾಲನೆ

ಅಂಕೋಲಾ: ತಾಲೂಕಿನ ಶಿರೂರು ಗ್ರಾಮದಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಗಂಗಾವಳಿ ನದಿಯಲ್ಲಿ ಸಂಗ್ರಹವಾಗಿರುವ ಮಣ್ಣಿನ ಕೃತಕ ದಿಬ್ಬವನ್ನು ತೆರವುಗೊಳಿಸುವ 4.34 ಕೋಟಿ ರೂ. ವೆಚ್ಚದ ಕಾಮಗಾರಿಗೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಸತೀಶ್ ಕೆ. ಸೈಲ್ ಗುರುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಭೂಕುಸಿತದಿಂದ ನದಿಯಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಮಣ್ಣು ಪಕ್ಕದ ಉಳುವರೆ ಗ್ರಾಮ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಭವಿಷ್ಯದಲ್ಲಿ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು ಎಂದರು.

ಈ ಕಾಮಗಾರಿಗೆ ಮೊದಲ ಹಂತದಲ್ಲಿ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ, ನಾಲ್ಕು ಬಾರಿ ಟೆಂಡರ್ ಆಹ್ವಾನಿಸಿದರೂ ಯಾವುದೇ ಗುತ್ತಿಗೆದಾರರು ಮುಂದೆ ಬಂದಿರಲಿಲ್ಲ. ನದಿಯ ಆಳ ಹಾಗೂ ಮಣ್ಣಿನ ಸಂಗ್ರಹದ ಪ್ರಮಾಣವನ್ನು ತಿಳಿಯಲು ಹೈಡ್ರೋಗ್ರಾಫಿಕ್ ಸರ್ವೆ ಅಗತ್ಯವಿರುವುದು ತಿಳಿದುಬಂದ ನಂತರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿಯಾಗಿ 2.34 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಯಿತು. ಹೀಗೆ ಒಟ್ಟು 4.34 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು 4ಜಿ ವಿನಾಯಿತಿ ಪಡೆದು ಅಬಿಷೇಯಾ ಓಶಿಯನ್ ಸರ್ವಿಸ್ ಸಂಸ್ಥೆಗೆ ನೀಡಲಾಗಿದೆ ಎಂದು ತಿಳಿಸಿದರು.

ಶಿರೂರು ಭೂಕುಸಿತ ದುರಂತವನ್ನು ಸ್ಮರಿಸಿದ ಸೈಲ್, ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ನೌಕಾದಳದ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ 72 ದಿನಗಳ ಕಾಲ ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಕೇರಳ ಮೂಲದ ಅರ್ಜುನನ ಮೃತದೇಹ ಪತ್ತೆಯಾಗಿದ್ದರೂ, ಸ್ಥಳೀಯ ಇಬ್ಬರ ಮೃತದೇಹಗಳು ಇನ್ನೂ ಪತ್ತೆಯಾಗದಿರುವ ನೋವು ಉಳಿದಿದೆ ಎಂದು ಹೇಳಿದರು.

ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರ ಹಿತಕ್ಕಾಗಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಕ್ಷೇತ್ರದ ಜನರು ಸೇವೆ ಮಾಡಲು ಅವಕಾಶ ನೀಡಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ತಹಶೀಲ್ದಾರ್ ನಿಶ್ಚಲ್ ನರೋನ್ಹಾ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಮು ಗುನಗಿ, ಬಂದರು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಥೋಡ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share