ರೈತನಿಗೆ ತನ್ನ ಕೃಷಿ ಭೂಮಿಯೇ ಬದುಕಿನ ಆಧಾರ. ಆದರೆ ಇಂದು ಅನೇಕ ರೈತರು ತಮ್ಮ ಪಹಣಿ (RTC) ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸದೆ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಜಮೀನಿನಲ್ಲಿ ಬೆಳೆ ಬೆಳೆದರೂ, ಸರ್ಕಾರಿ ದಾಖಲೆಗಳಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂಬುದನ್ನು ಬಹುತೇಕರು ಪರಿಶೀಲಿಸುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಭೂ ದಾಖಲೆಗಳ ಕುರಿತು ರಾಜ್ಯದಲ್ಲಿ ಹೆಚ್ಚಿದ ಚರ್ಚೆಯ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ರೈತನೂ ತನ್ನ ಜಮೀನಿನ ಪಹಣಿಯನ್ನು ಸ್ವತಃ ಒಮ್ಮೆ ಪರಿಶೀಲಿಸಿಕೊಳ್ಳುವುದು ಅತ್ಯಗತ್ಯ. ಇದು ಯಾರ ಮೇಲಿನ ಅನುಮಾನಕ್ಕಾಗಿ ಅಲ್ಲ, ತಮ್ಮ ಆಸ್ತಿಯ ದಾಖಲೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ.
ಕರ್ನಾಟಕ ಸರ್ಕಾರದ ಭೂಮಿ (Bhoomi) ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಪ್ರತಿಯೊಬ್ಬ ರೈತರೂ ತಮ್ಮ ಜಮೀನಿನ ಪಹಣಿ ಹಾಗೂ ಜಮೀನಿನ ನಕ್ಷೆಯನ್ನು ಉಚಿತವಾಗಿ ವೀಕ್ಷಿಸಬಹುದು. ಇದಕ್ಕಾಗಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೇ ನಂಬರ್ ನಮೂದಿಸಿದರೆ ಸಾಕು, ನಿಮ್ಮ ಆರ್‌ಟಿಸಿಯ ಸಂಪೂರ್ಣ ವಿವರವನ್ನು ತಿಳಿಯಬಹುದು.
ನಿಮ್ಮ ಪಹಣಿಯ ದಾಖಲೆಯನ್ನು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
https://www.landrecords.karnataka.gov.in/service2/RTC.aspx
ಪಹಣಿಯಲ್ಲಿ ಮುಖ್ಯವಾಗಿ ನಾಲ್ಕು ವಿಷಯಗಳನ್ನು ಪರಿಶೀಲಿಸಬೇಕು. ಜಮೀನಿನ ಮಾಲೀಕರ ಹೆಸರುಸರಿಯಾಗಿದೆಯೇ, ಸರ್ವೇ ನಂಬರ್, ವಿಸ್ತೀರ್ಣ ಮತ್ತು ಖಾತೆ ವಿವರಗಳು ನಿಮ್ಮ ದಾಖಲೆಗಳಿಗೆ ಹೊಂದಿಕೆಯಾಗುತ್ತಿವೆಯೇ, ಇತರೆ ಹಕ್ಕುಗಳು (Other Rights/Remarks)ಎಂಬ ಅಂಕಣದಲ್ಲಿ ಯಾವುದಾದರೂ ವ್ಯಕ್ತಿ, ಸಂಸ್ಥೆ, ಬ್ಯಾಂಕ್ ಅಥವಾ ಇಲಾಖೆಯ ಉಲ್ಲೇಖ ಇದೆಯೇ, ಮ್ಯುಟೇಷನ್ (MR) ವಿವರಗಳು ಯಾವ ಆಧಾರದ ಮೇಲೆ ದಾಖಲಾಗಿವೆ ಎಂಬುದನ್ನು ಪರಿಶೀಲಿಸಬೇಕು.
ಕೆಲವೊಮ್ಮೆ ರೈತರಿಗೆ ಗೊತ್ತಿಲ್ಲದ ವ್ಯಕ್ತಿಯ ಹೆಸರು, ಯಾವುದಾದರೂ ಸಂಸ್ಥೆಯ ಉಲ್ಲೇಖ ಅಥವಾ ಪರಿಚಯವಿಲ್ಲದ ನಮೂದು ಕಂಡುಬರಬಹುದು. ಅಂತಹ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ. ಮೊದಲು ಆ ನಮೂದು ಯಾವ ಆದೇಶದ ಆಧಾರದಲ್ಲಿ ದಾಖಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.
ಅನೇಕ ಬಾರಿ ಅದು ಬ್ಯಾಂಕ್ ಸಾಲ, ನ್ಯಾಯಾಲಯದ ಆದೇಶ, ಭೂ ಸುಧಾರಣಾ ಕಾಯ್ದೆ, ಉತ್ತರಾಧಿಕಾರ ಬದಲಾವಣೆ ಅಥವಾ ಬೇರೆ ಕಾನೂನು ಪ್ರಕ್ರಿಯೆಗೆ ಸಂಬಂಧಿಸಿರಬಹುದು. ಪ್ರತಿಯೊಂದು ಅಪರಿಚಿತ ನಮೂದೂ ಅಕ್ರಮ ಅಥವಾ ಮಾಲೀಕತ್ವ ಬದಲಾವಣೆಯ ಸೂಚನೆಯಾಗಿರಲೇಬೇಕೆಂದಿಲ್ಲ.
ಆದರೆ, ಆ ನಮೂದು ಏಕೆ ದಾಖಲಾಗಿದೆ ಎಂಬುದು ಅರ್ಥವಾಗದಿದ್ದರೆ ಅಥವಾ ಅದು ತಪ್ಪಾಗಿದೆ ಎಂದು ಅನುಮಾನ ಬಂದರೆ, ವಿಳಂಬ ಮಾಡದೆ ಸಂಬಂಧಿಸಿದ ಗ್ರಾಮ ಆಡಳಿತಾಧಿಕಾರಿ (VA), ಕಂದಾಯ ನಿರೀಕ್ಷಕರು ಅಥವಾ ತಹಶೀಲ್ದಾರ್ ಕಚೇರಿಗೆ ತೆರಳಿ ಅದರ ದಾಖಲೆ ಆಧಾರವನ್ನು ಕೇಳಬೇಕು. ಅಗತ್ಯವಿದ್ದರೆ ಮ್ಯುಟೇಷನ್ ಆದೇಶದ ಪ್ರತಿ, ಸಂಬಂಧಿತ ದಾಖಲೆಗಳು ಹಾಗೂ ನೋಂದಣಿ ವಿವರಗಳನ್ನು ಪಡೆಯಬಹುದು. ತಪ್ಪು ನಮೂದು ಕಂಡುಬಂದರೆ ಅದನ್ನು ಸರಿಪಡಿಸಲು ಕಾನೂನಿನಲ್ಲೇ ಅವಕಾಶವಿದೆ.
ಭೂಮಿ ಎಂಬುದು ರೈತನ ಜೀವನದ ದೊಡ್ಡ ಆಸ್ತಿ. ಆದ್ದರಿಂದ ವರ್ಷಕ್ಕೊಮ್ಮೆ ಆದರೂ ತಮ್ಮ ಪಹಣಿಯನ್ನು ಸ್ವತಃ ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಅತ್ಯಗತ್ಯ. ಬ್ಯಾಂಕ್ ಪಾಸ್‌ಬುಕ್ ಹೇಗೆ ನೋಡುತ್ತೇವೋ, ಹಾಗೆಯೇ ಭೂ ದಾಖಲೆಗಳನ್ನೂ ನೋಡಬೇಕು. ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸಿದರೆ ಮುಂದಿನ ದಿನಗಳಲ್ಲಿ ಅನಗತ್ಯ ವಿವಾದಗಳು, ನ್ಯಾಯಾಲಯದ ಸುತ್ತಾಟ ಮತ್ತು ಗೊಂದಲಗಳನ್ನು ತಪ್ಪಿಸಬಹುದು.