ಎದುರಾಗುವ ಅನಾಹುತಗಳಿಗೆ ಆಡಳಿತವೇ ನೇರ ಹೊಣೆ; ಬಿಜೆಪಿ
ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ಆಶ್ರಯ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಯಲ್ಲಾಪುರ ಮಂಡಲ ಘಟಕ ಒತ್ತಾಯಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಮಂಡಲದ ಅಧ್ಯಕ್ಷ ಪ್ರಸಾದ ಹೆಗಡೆ, ಆಶ್ರಯ ಕಾಲೋನಿಯ ಸಮಸ್ಯೆಗಳ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಬಿಜೆಪಿ ನಿಯೋಗ ಆಶ್ರಯ ಕಾಲೋನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಮೂಲಸೌಕರ್ಯಗಳ ಕೊರತೆಯ ಜತೆಗೆ ಹಲವಾರು ಬಡವರ ಮನೆಗಳು ಕುಸಿಯುವ ಹಂತದಲ್ಲಿರುವುದು ಕಂಡುಬಂದಿದೆ.
ಪಟ್ಟಣದಲ್ಲಿ ರಾಜಕಾಲುವೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವುದರಿಂದ ಆಶ್ರಯ ಕಾಲೋನಿ ಸಮೀಪದ ಮೇಲ್ಭಾಗದಲ್ಲಿರುವ ಮನೆಗಳಿಗೆ ಅಪಾಯ ಎದುರಾಗಿದ್ದು, ಮಳೆಗಾಲದಲ್ಲಿ ನಿವಾಸಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.
ಇದೇ ವೇಳೆ ಆಶ್ರಯ ಕಾಲೋನಿಯ ಹಿಂಭಾಗದಲ್ಲಿ ಹುಲ್ಲು ಮತ್ತು ಪೊದೆಗಳು ದಟ್ಟವಾಗಿ ಬೆಳೆದಿದ್ದು, ಹಂದಿ ಹಾಗೂ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆಗೆ ತೆರಳುವ ಮಕ್ಕಳ ಸುರಕ್ಷತೆಯ ಬಗ್ಗೆ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ರಾಜಕಾಲುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವುದು, ಸಾರ್ವಜನಿಕರಿಗೆ ಎದುರಾಗಿರುವ ಅಪಾಯ ನಿವಾರಿಸುವುದು ಹಾಗೂ ಪೊದೆಗಳನ್ನು ತೆರವುಗೊಳಿಸಿ ಬೀದಿ ನಾಯಿಗಳು ಮತ್ತು ಹಂದಿಗಳ ಹಾವಳಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಸಂಭವಿಸಬಹುದಾದ ಅನಾಹುತಗಳಿಗೆ ಆಡಳಿತವೇ ನೇರ ಹೊಣೆಯಾಗಲಿದೆ ಎಂದು ಬಿಜೆಪಿ ಎಚ್ಚರಿಸಿದೆ.
ಸ್ಥಳ ಪರಿಶೀಲನೆ ವೇಳೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣೇಶ ಪಾಟಣಕರ, ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ದೇವಾಡಿಗ, ಕಾಳಮ್ಮನಗರ ಬೂತ್ ಅಧ್ಯಕ್ಷ ತುಳಸಿದಾಸ ನಾಯ್ಕ ಉಪಸ್ಥಿತರಿದ್ದರು ಎಂದು ಪ್ರಸಾದ ಹೆಗಡೆ ಮಾಹಿತಿ ನೀಡಿದ್ದಾರೆ.