Friday, March 13, 2026
HomeLocal Newsಇಂಟರ್ನೆಟ್ ಬಳಸುವಾಗ ಎಚ್ಚರಿಕೆಯಿರಲಿ

ಇಂಟರ್ನೆಟ್ ಬಳಸುವಾಗ ಎಚ್ಚರಿಕೆಯಿರಲಿ

ಕಾರವಾರ: ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲವನ್ನು ಎಚ್ಚರಿಕೆಯಿಂದ ಬಳಸಬೇಕು ಹಾಗೂ ಅನಾವಶ್ಯಕ ಲಿಂಕ್‌ಗಳನ್ನು ತೆರೆದು ವಂಚನೆಗೆ ಒಳಗಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.

ಅವರು ಫೆ.10ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಇವರ ಸಯೋಗದಲ್ಲಿ ನಡೆದ ವಿಶ್ವ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಇತ್ತಿಚೀನ ದಿನಗಳಲ್ಲಿ ಪ್ರತಿಯೊಬ್ಬರೂ ಅಂತರ್ಜಾಲ ಬಳಸುತ್ತಿದ್ದು, ಪ್ರತಿಯೊಬ್ಬರ ಜೀವನದಲ್ಲಿ ಅಂತರ್ಜಾಲ ಅವಿಭಾಜ್ಯ ಅಂಗವಾಗಿದೆ. ಅಂತರ್ಜಾಲ ಬಳಕೆಯಿಂದ ಆಗುವ ಉಪಯೋಗಕ್ಕಿಂತ ಅದರಿಂದ ಆಗುವ ಅನಾಹುತಗಳೇ ಹೆಚ್ಚಾಗಿವೆ. ಅಂತರ್ಜಾಲ ಬಳಕೆ ಹೆಚ್ಚಾದಂತೆ ಆನ್‌ಲೈನ್ ವಂಚನೆಗಳು ಹೆಚ್ಚಾಗಿದ್ದು, ಬಹುತೇಕ ವಿದ್ಯಾವಂತರೇ ಈ ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ವೈಯಕ್ತಿಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು, ಆನ್‌ಲೈನ್ ಮೂಲಕ ಹೂಡಿಕೆ ಮಾಡುವುದು, ಅವಶ್ಯಕವಲ್ಲದ ಲಿಂಕ್‌ಗಳನ್ನು ತೆರೆಯುವ ಮೂಲಕ ವಂಚನೆಗಳಿಗೆ ಒಳಗಾಗುತ್ತಿದ್ದು, ಇವುಗಳನ್ನು ತಡೆಯಲು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದರು.

ತಂತ್ರಜ್ಞಾನ ಬೆಳದಂತೆ ಜನರ ಜೀವನ ಶೈಲಿಯೂ ವೇಗವಾಗಿ ಬೆಳೆಯುತ್ತಿದೆ ಜಾಹೀರಾತುಗಳಿಂದ ಪ್ರೇರೇಪಿತವಾಗಿ ಜನರು ತಮ್ಮ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ಂI ಯುಗದಲ್ಲಿ ಒಂದು ಚಿಕ್ಕ ವೈಯಕ್ತಿಕ ಮಾಹಿತಿಯು ಜೀವನದ ದಿಕ್ಕು ಬದಲಿಸಬಹುದಾಗಿದ್ದು, ತಂತ್ರಜ್ಞಾನವನ್ನು ಜ್ಞಾನ ವೃದ್ಧಿಗೆ ಬಳಸಬೇಕೆ ಹೊರತು ತಂತ್ರಜ್ಞಾನದ ಬಳಕೆಯಿಂದ ತೊಂದರೆಗೆ ಒಳಗಾಗಬಾರದು ಎಂದರು.

ಸೈಬರ್ ಕ್ರೈಂ ವಿಭಾಗದ ಅಧಿಕಾರಿ ಸುದರ್ಶನ ಮಾತನಾಡಿ, ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೈಬರ್ ವಂಚನೆಯ ಜಾಲಕ್ಕೆ ಒಳಗಾಗುತ್ತಿದ್ದು, ಸರಿಯಾದ ಜ್ಞಾನ-ತಿಳುವಳಿಕೆ ಇಲ್ಲದೇ ನಾವಾಗಿಯೇ ಅಂತರ್ಜಾಲ ಬಳಕೆ ವೇಳೆ ತಪ್ಪುಗಳನ್ನು ಮಾಡಿ ತೊಂದರೆಗೀಡಾಗುತ್ತೇವೆ. ಆನ್‌ಲೈನ್ ಹೂಡಿಕೆ, ಆಕರ್ಷಕ ಜಾಹೀರಾತುಗಳು ಸೇರಿದಂತೆ ಅನೇಕ ವಂಚನೆಗಳಿಗೆ ಒಳಗಾಗುವ ಯುವ ಜನತೆಗೆ ಪ್ರಾಥಮಿಕ ಮಾಹಿತಿ ಇಲ್ಲದೇ ಇರುವದೇ ಇದಕ್ಕೆ ಕಾರಣವಾಗಿದೆ. ಇ-ಮೇಲ್ ಹಾಗೂ ಮೊಬೈಲ್ ಸಂಖ್ಯೆಗೆ ಬರುವ ಅನವಶ್ಯಕ ಲಿಂಕ್ ಒತ್ತುವ ಮೂಲಕ ತಮ್ಮ ವೈಯಕ್ತಿಕ ಮಾಹಿತಿ ನೀಡುವುದರಿಂದ ವಂಚನೆಗಳು ಹೆಚ್ಚಾಗುತ್ತಿವೆ. ವೈಯಕ್ತಿಕ ಮಾಹಿತಿ, ಒಟಿಪಿ, ಬ್ಯಾಂಕ್ ವಿವರ ಮತ್ತಿತರ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದರು.

 ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿ ಸಾಗರ ಮಾತನಾಡಿ, ಪ್ರತಿ ವರ್ಷ ಫೆಬ್ರವರಿ ತಿಂಗಳ 2ನೇ ಮಂಗಳವಾರ ವಿಶ್ವ ಸುರಕ್ಷಿತ ಅಂತರ್ಜಾಲ ದಿನ ಆಚರಿಸಲಾಗುತ್ತಿದ್ದು, ಇಂಟರ್ನೆಟ್ ಮೂಲಕ ನಡೆಯುವ ಅಪರಾಧಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಸುರಕ್ಷಿತ ಅಂತರ್ಜಾಲ ಬಳಕೆಯ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ಸೈಬರ್ ವಂಚನೆಯಾದಲ್ಲಿ ಉಚಿತ ದೂರವಾಣಿ ಸಂಖ್ಯೆ. 1930 ಸಂಪರ್ಕಿಸುವಂತೆ ತಿಳಿಸಿದರು.

ಕಾರ್ಯಾಗಾರದಲ್ಲಿ ಭೂ ದಾಖಲೆಗಳ ಉಪ ನಿರ್ದೇಶಕ ಸಂದೀಪ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share