ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಭಟ್ಕಳ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆ ಗಾಂಜಾ ಸೇವನೆ ದೃಢಪಟ್ಟಿದೆ.
ಆರೋಪಿಯನ್ನು ಭಟ್ಕಳದ ಮೊಗ್ದುಂ ಕಾಲೋನಿ ನಿವಾಸಿ ಗುಲ್ಜಾರ್ ಅಹ್ಮದ್ (40) ಎಂದು ಗುರುತಿಸಲಾಗಿದೆ.
ಜುಲೈ 13ರಂದು ರಾತ್ರಿ ಸುಮಾರು 10.15ರ ವೇಳೆಗೆ ಭಟ್ಕಳ ತಾಲೂಕಿನ ವೆಂಕಟಾಪುರ ಐಸ್ ಫ್ಯಾಕ್ಟರಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಆರೋಪಿಯು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದ ತಂಡ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ತಾನು ಗಾಂಜಾ ಸೇವಿಸಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ. ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.