ಶಿರಸಿಯಲ್ಲಿ ಗಾಂಜಾ ಮಾರಾಟಕ್ಕೆ ಬಂದಿದ್ದ ಹಾವೇರಿ ಆಸಾಮಿ ಕಾರು ಸಮೇತ ವಶಕ್ಕೆ
ಶಿರಸಿ: ಗಾಂಜಾ ಮಾರಾಟ ಮಾಡಲು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾನೆ ಎಂಬ ಆರೋಪದ ಮೇರೆಗೆ ಶಿರಸಿ ನಗರ ಪೊಲೀಸರು ಹಾವೇರಿ ಜಿಲ್ಲೆಯ ಯುವಕನನ್ನು ಬಂಧಿಸಿ, ಗಾಂಜಾ, ಕಾರು, ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಹಾನಗಲ್ (ಹಾವೇರಿ ಜಿಲ್ಲೆ) ನವನಗರ ನಿವಾಸಿ ಇಮ್ರಾನ್ ಅಹ್ಮದ್ ಮಕ್ಬೂಲ್ ಅಹ್ಮದ್ ಬ್ಯಾಡಗಿ (29) ಎಂದು ಗುರುತಿಸಲಾಗಿದೆ.
ಆರೋಪಿಯು ಯಾವುದೇ ಪರವಾನಗಿ ಅಥವಾ ಅನುಮತಿ ಇಲ್ಲದೆ ಅಕ್ರಮ ಲಾಭಕ್ಕಾಗಿ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಹುಂಡೈ i10 (KA-15/N-3563) ಕಾರಿನಲ್ಲಿ ಸಾಗಾಟ ಮಾಡಿಕೊಂಡು ಶಿರಸಿ ನಗರದ ಹಾರ್ಟಿಕಲ್ಚರ್ ಕಾಲೇಜು ಕ್ರಾಸ್ ಸಮೀಪ ಗಿರಾಕಿಗಾಗಿ ಕಾಯುತ್ತಿದ್ದ.
ಈ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಜುಲೈ 14, 2026ರಂದು ಸಂಜೆ 7.30ರ ಸುಮಾರಿಗೆ ಪೊಲೀಸ್ ಉಪನಿರೀಕ್ಷಕ ನರಸಿಂಹಲು ಅವರ ನೇತೃತ್ವದಲ್ಲಿ ಪಂಚರ ಸಮ್ಮುಖದಲ್ಲಿ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಕಾರಿನಲ್ಲಿದ್ದ 253 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹20,000), ಒಂದು ಟವಲ್, ಒಂದು ಸ್ಟೀಲ್ ಚಾಕು, ಸುಮಾರು ₹1 ಲಕ್ಷ ಮೌಲ್ಯದ ಹುಂಡೈ i10 ಕಾರು ಹಾಗೂ ₹2,000 ಮೌಲ್ಯದ ಸ್ಯಾಮ್ಸಂಗ್ ಮೊಬೈಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.