ಸೈಬರ್ ವಂಚಕರಿಗೆ ಈಗ ಒಟಿಪಿಯೂ ಬೇಡ | ಎಸ್‌ಎಂಎಸ್ ಅಲರ್ಟ್ ಬರಲ್ಲ!
ಬೆಂಗಳೂರು: ಮನೆ ಸಾಲ ಪಡೆಯುವ ಕನಸಿನಲ್ಲಿ ಸಲ್ಲಿಸಿದ್ದ ಒಂದು ಆನ್‌ಲೈನ್ ಅರ್ಜಿ, ಮಹಿಳೆಯೊಬ್ಬರ ಬದುಕನ್ನೇ ಆತಂಕದ ಕೂಪಕ್ಕೆ ತಳ್ಳಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡ ಸೈಬರ್ ವಂಚಕರು, ಅಶ್ಲೀಲ ಮಾರ್ಫ್ ಫೋಟೋಗಳನ್ನು ಸೃಷ್ಟಿಸಿ ಮಾನಹಾನಿಯ ಬೆದರಿಕೆ ಹಾಕುವುದರ ಜೊತೆಗೆ, ಬರೋಬ್ಬರಿ 48 ಲಕ್ಷ ರೂ. ಹಣವನ್ನು ವಂಚಿಸಿರುವ ಆರೋಪ ಕೇಳಿಬಂದಿದೆ.
ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಮನೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವೇಳೆ ತಮ್ಮ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಕಚೇರಿ ವಿವರಗಳು ಹಾಗೂ ಫೋಟೋ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್ ಮೂಲಕ ಹಂಚಿಕೊಂಡಿದ್ದರು.
ಇದೇ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಸೈಬರ್ ವಂಚಕರು ಕಳೆದ ಐದು ತಿಂಗಳಿಂದ ಅಂತಾರಾಷ್ಟ್ರೀಯ ವಾಟ್ಸಾಪ್ ಸಂಖ್ಯೆಗಳ ಮೂಲಕ ನಿರಂತರವಾಗಿ ಸಂಪರ್ಕಿಸಿ ಬೆದರಿಕೆ ಹಾಕಲು ಆರಂಭಿಸಿದ್ದರು.
ನಿಮ್ಮ ಹೆಸರಿನಲ್ಲಿ ಈಗಾಗಲೇ ಹಲವು ಲೋನ್ ಆ್ಯಪ್‌ಗಳಿಂದ ಸಾಲ ಪಡೆಯಲಾಗಿದೆ, ತಕ್ಷಣ ಹಣ ಮರುಪಾವತಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆದರಿಕೆ ಹಾಕಿದ ಆರೋಪಿಗಳು, ಬಳಿಕ ಮಹಿಳೆಯ ಅಶ್ಲೀಲ ಮಾರ್ಫ್ ಫೋಟೋಗಳನ್ನು ಸೃಷ್ಟಿಸಿ ಅವರಿಗೇ ಕಳುಹಿಸಿದ್ದಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಮಾನಹಾನಿಯ ಭಯದಿಂದ ಮಹಿಳೆ ಆರಂಭದಲ್ಲಿ 3.5 ಲಕ್ಷ ರೂ. ಹಣವನ್ನು ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ನಂತರ ತಾನು ಮೋಸ ಹೋಗಿರುವುದು ಅರಿವಾಗಿ ಮೊಬೈಲ್ ಹಾಗೂ ಸಿಮ್ ಕಾರ್ಡ್ ಬದಲಾಯಿಸಿಕೊಂಡಿದ್ದಾರೆ.
ಆದರೆ ಅಲ್ಲಿಗೇ ವಂಚನೆ ನಿಂತಿಲ್ಲ. ಇತ್ತೀಚೆಗೆ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿದಾಗ, ತಮ್ಮ ಖಾತೆಯಿಂದ 45 ಲಕ್ಷ ರೂ. ಹೆಚ್ಚುವರಿ ಹಣವೂ ವರ್ಗಾವಣೆಯಾಗಿರುವುದು ಕಂಡು ಮಹಿಳೆ ಬೆಚ್ಚಿಬಿದ್ದಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಈ ಹಣ ವರ್ಗಾವಣೆಯ ವೇಳೆ ಸಾಮಾನ್ಯವಾಗಿ ಬರಬೇಕಾದ ಒಟಿಪಿ ಅಥವಾ ಎಸ್‌ಎಂಎಸ್ ಎಚ್ಚರಿಕೆ ಸಂದೇಶಗಳೂ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಕ್ಷಣ ಬ್ಯಾಂಕ್ ಸಂಪರ್ಕಿಸಿದಾಗ, 1930 ಸೈಬರ್ ಸಹಾಯವಾಣಿಗೆ ದೂರು ನೀಡುವಂತೆ ಸೂಚಿಸಲಾಗಿದೆ. ಅದರಂತೆ ಮಹಿಳೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಈ ಘಟನೆ, ಆನ್‌ಲೈನ್‌ನಲ್ಲಿ ವೈಯಕ್ತಿಕ ದಾಖಲೆಗಳನ್ನು ಹಂಚಿಕೊಳ್ಳುವಾಗ ಎಷ್ಟು ಎಚ್ಚರಿಕೆ ಅಗತ್ಯ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ. ವಿಶೇಷವಾಗಿ ಅಪರಿಚಿತ ಲಿಂಕ್‌ಗಳು, ಸಾಲದ ಆ್ಯಪ್‌ಗಳು ಹಾಗೂ ಅನುಮಾನಾಸ್ಪದ ಕರೆಗಳ ಬಗ್ಗೆ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸುವಂತೆ ಸೈಬರ್ ತಜ್ಞರು ಸಲಹೆ ನೀಡುತ್ತಿದ್ದಾರೆ.