Tuesday, July 28, 2026
Join WhatsApp Group
HomeNationalಪೊಲೀಸರ ಹೊಸ 'ಕಣ್ಣು' AjnaLens!

ಪೊಲೀಸರ ಹೊಸ ‘ಕಣ್ಣು’ AjnaLens!

ಮೆಟಾ AI ಗ್ಲಾಸ್‌ ಬದಿಗಿಡಿ, ಇದು ಭಾರತದಲ್ಲೇ ತಯಾರಾದ AI ಕನ್ನಡಕ!

ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು ಧರಿಸಿದ್ದ ಸ್ಮಾರ್ಟ್ ಕನ್ನಡಕಗಳು ಸಾರ್ವಜನಿಕರ ಗಮನ ಸೆಳೆದಿವೆ. ಸೋಷಿಯಲ್‌ ಮೀಡಿಯಾಗಳಲ್ಲಂತೂ ಇದರದ್ದೇ ಚರ್ಚೆ. ಅದು Meta AI Glass ಅಂತೆ, ಮುಖ ನೋಡಿದ ತಕ್ಷಣ ವ್ಯಕ್ತಿಯನ್ನು ಗುರುತಿಸುತ್ತದೆಯಂತೆ, ರಿಯಲ್‌ಟೈಮ್‌ನಲ್ಲಿ ಪೊಲೀಸರಿಗೆ ಮಾಹಿತಿ ತಲುಪಿಸುತ್ತದೆಯಂತೆ…

 ಈ ಬಗ್ಗೆ ದೆಹಲಿ ಪೊಲೀಸರಂತೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಈ ಚರ್ಚೆಯ ನಡುವೆ ಹೆಚ್ಚು ಕುತೂಹಲ ಕೆರಳಿಸಿರುವುದು ಭಾರತದಲ್ಲೇ ನಿರ್ಮಾಣವಾದ AjnaLens ತಂತ್ರಜ್ಞಾನ. ವಿದೇಶಿ ಕಂಪನಿಗಳ ಸ್ಮಾರ್ಟ್ ಗ್ಲಾಸ್‌ಗಳಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಈ “ಮೇಡ್ ಇನ್ ಇಂಡಿಯಾ” ತಂತ್ರಜ್ಞಾನವು ರಕ್ಷಣಾ, ಪೊಲೀಸ್ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದೆ.

AjnaLens Pvt. Ltd. ಎಂಬ ಮುಂಬೈ ಮೂಲದ ಡೀಪ್‌ಟೆಕ್ ಕಂಪನಿಯು 2014ರಲ್ಲಿ ಸ್ಥಾಪನೆಯಾಯಿತು. ಕಂಪನಿಯ ಸಹ-ಸಂಸ್ಥಾಪಕರಾದ ಅಭಿಜಿತ್ ಪಾಟೀಲ್, ಅಭಿಷೇಕ್ ತೋಮರ್ ಹಾಗೂ ಉತ್ಸವ್ ಮಲಿಕ್ ಅವರು ಭಾರತದಲ್ಲೇ ಅತ್ಯಾಧುನಿಕ Augmented Reality (AR), Mixed Reality (MR), Artificial Intelligence (AI) ಆಧಾರಿತ ಸ್ಮಾರ್ಟ್ ಸಾಧನಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಈ ಸಂಸ್ಥೆಯನ್ನು ಆರಂಭಿಸಿದರು.

AjnaLens ಒಂದು ಸಾಮಾನ್ಯ ಕ್ಯಾಮೆರಾ ಕನ್ನಡಕವಲ್ಲ. ಇದರಲ್ಲಿ ಕ್ಯಾಮೆರಾ, ಮೈಕ್ರೊಫೋನ್‌, AI ಪ್ರೊಸೆಸರ್‌, ವೈರ್‌ಲೆಸ್ ಸಂಪರ್ಕ, ಸೆನ್ಸರ್‌ಗಳು ಹಾಗೂ ವಿಶೇಷ ಸಾಫ್ಟ್‌ವೇರ್‌ಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಒಬ್ಬ ಪೊಲೀಸ್ ಅಧಿಕಾರಿ ಇದನ್ನು ಧರಿಸಿದರೆ, ಆತ ನೋಡುತ್ತಿರುವ ದೃಶ್ಯವನ್ನು ಹ್ಯಾಂಡ್ಸ್‌-ಫ್ರೀ ಆಗಿಯೇ ರೆಕಾರ್ಡ್ ಮಾಡಬಹುದು. ಅಗತ್ಯವಿದ್ದರೆ ಆ ವಿಡಿಯೊವನ್ನು ನೇರವಾಗಿ ಕಂಟ್ರೋಲ್ ರೂಮ್‌ಗೆ ಕಳುಹಿಸಬಹುದು.

ಅಧಿಕಾರಿಯ ಮುಂದೆ ಬೇಕಾದ ಮಾಹಿತಿ ಕನ್ನಡಕದಲ್ಲೇ ಕಾಣಿಸಬಹುದು. QR ಕೋಡ್‌, ಗುರುತಿನ ಚೀಟಿ ಅಥವಾ ದಾಖಲೆಗಳನ್ನು ಸ್ಕ್ಯಾನ್ ಮಾಡಬಹುದು. ರಾತ್ರಿ ಅಥವಾ ಕಡಿಮೆ ಬೆಳಕಿನ ಪರಿಸ್ಥಿತಿಯಲ್ಲೂ ಥರ್ಮಲ್ ಇಮೇಜಿಂಗ್ ಮೂಲಕ ವೀಕ್ಷಣೆ ನಡೆಸುವ ವ್ಯವಸ್ಥೆಯನ್ನೂ ಸೇರಿಸಬಹುದು.

ಇದರ ಅತ್ಯಂತ ಗಮನಾರ್ಹ ವೈಶಿಷ್ಟ್ಯ Face Recognition. ಆದರೆ, ಮುಖ ಗುರುತಿಸುವ ಸಾಮರ್ಥ್ಯ ಕನ್ನಡಕದಲ್ಲೇ ಇರುವುದಿಲ್ಲ. ಕನ್ನಡಕವು ಕ್ಯಾಮೆರಾದ ಮೂಲಕ ಚಿತ್ರವನ್ನು ಸೆರೆಹಿಡಿಯುತ್ತದೆ. ನಂತರ ಆ ಮಾಹಿತಿ ಸುರಕ್ಷಿತ ನೆಟ್‌ವರ್ಕ್ ಮೂಲಕ AI ಸರ್ವರ್‌ಗೆ ತಲುಪುತ್ತದೆ. ಅಲ್ಲಿ ಪೊಲೀಸ್ ಇಲಾಖೆಯ ಅಪರಾಧಿಗಳ ಡೇಟಾಬೇಸ್‌ನೊಂದಿಗೆ ಮುಖವನ್ನು ಹೋಲಿಸಲಾಗುತ್ತದೆ. ಹೊಂದಾಣಿಕೆ ಕಂಡುಬಂದರೆ ಕೆಲವೇ ಕ್ಷಣಗಳಲ್ಲಿ ಸಂಬಂಧಿತ ಅಧಿಕಾರಿಯ ಮೊಬೈಲ್ ಅಥವಾ ಕಂಟ್ರೋಲ್ ರೂಮ್‌ಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಅಂದರೆ ಕೆಲಸ ಮಾಡುವುದು ಕನ್ನಡಕ ಮಾತ್ರವಲ್ಲ, ಅದರ ಹಿಂದೆ ಕಾರ್ಯನಿರ್ವಹಿಸುವ ಸಂಪೂರ್ಣ AI ವ್ಯವಸ್ಥೆ.

ದೆಹಲಿ ಪೊಲೀಸರ ಗಣರಾಜ್ಯೋತ್ಸವ ಭದ್ರತಾ ವ್ಯವಸ್ಥೆಯಲ್ಲಿ ತನ್ನ AI Smart Glasses ಬಳಸಲಾಗಿದ್ದು, 65 ಸಾವಿರಕ್ಕೂ ಹೆಚ್ಚು ಅಪರಾಧಿಗಳ ಡೇಟಾಬೇಸ್‌ನೊಂದಿಗೆ ಮುಖ ಹೋಲಿಕೆ ಮಾಡುವ ವ್ಯವಸ್ಥೆ ಅಳವಡಿಸಲಾಗಿತ್ತು ಎಂದು ಕಂಪನಿ ಹೇಳಿಕೊಂಡಿದೆ.

ಹಾಗಾದರೆ Meta AI Glass ಮತ್ತು AjnaLens ನಡುವಿನ ವ್ಯತ್ಯಾಸವೇನು? ಎರಡೂ ಸ್ಮಾರ್ಟ್ ಕನ್ನಡಕಗಳೇ ಆಗಿದ್ದರೂ ಅವುಗಳ ಉದ್ದೇಶ ಸಂಪೂರ್ಣ ವಿಭಿನ್ನ. Meta Ray-Ban Smart Glasses ಸಾಮಾನ್ಯ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಅದು ಪೊಲೀಸ್ ಡೇಟಾಬೇಸ್‌ಗೆ ಸಂಪರ್ಕ ಹೊಂದಿ ಸ್ವಯಂಚಾಲಿತವಾಗಿ ಅಪರಾಧಿಗಳನ್ನು ಗುರುತಿಸುವ ವ್ಯವಸ್ಥೆಯಲ್ಲ.

ಇದಕ್ಕೆ ವಿರುದ್ಧವಾಗಿ AjnaLens ಸಂಪೂರ್ಣವಾಗಿ Enterprise ಮತ್ತು Security Platform. ಸರ್ಕಾರ ಅಥವಾ ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ಫೇಸ್ ರೆಕಗ್ನಿಷನ್‌, ಥರ್ಮಲ್ ಕ್ಯಾಮೆರಾ, ಲೈವ್ ಕಮಾಂಡ್ ಕಂಟ್ರೋಲ್‌, ಡ್ರೋನ್ ಸಂಪರ್ಕ, ಭದ್ರತಾ ಡೇಟಾಬೇಸ್‌, AR ಮಾಹಿತಿ ಪ್ರದರ್ಶನ ಸೇರಿದಂತೆ ಹಲವು ವಿಶೇಷ ವ್ಯವಸ್ಥೆಗಳನ್ನು ಸೇರಿಸಬಹುದು. ಅಂದರೆ Meta AI Glass ಒಂದು ಸ್ಮಾರ್ಟ್ ಗ್ರಾಹಕ ಉತ್ಪನ್ನವಾದರೆ, AjnaLens ಒಂದು ವೃತ್ತಿಪರ ಭದ್ರತಾ ಮತ್ತು ಕಾರ್ಯಾಚರಣಾ ಸಾಧನ.

ಭಾರತದಲ್ಲೇ ಅಭಿವೃದ್ಧಿಯಾಗಿರುವ ಈ ತಂತ್ರಜ್ಞಾನ ಭವಿಷ್ಯದ ಪೊಲೀಸ್ ಕಾರ್ಯವೈಖರಿ, ರಕ್ಷಣಾ ವ್ಯವಸ್ಥೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ಇದರ ಬಳಕೆಯ ಜೊತೆಗೆ ನಾಗರಿಕರ ಗೌಪ್ಯತೆ, ಡೇಟಾ ಭದ್ರತೆ ಮತ್ತು ಕಾನೂನುಬದ್ಧ ನಿಯಂತ್ರಣಗಳ ಬಗ್ಗೆ ಸಮಾನವಾಗಿ ಚರ್ಚೆ ನಡೆಯಬೇಕಿರುವುದು ಸಹ ಅಷ್ಟೇ ಸತ್ಯ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share