ನಾಗಾಲ್ಯಾಂಡ್‌ನಲ್ಲಿ ಪತ್ತೆಯಾದ ಹೊಸ ಪ್ರಭೇದ
ನಮ್ಮ ಕಣ್ಣಿಗೆ ಕಾಣುವ ಪ್ರಕೃತಿಯೇ ಇಷ್ಟೊಂದು ಅದ್ಭುತವಾಗಿದ್ದರೆ, ಕಣ್ಣಿಗೆ ಕಾಣದ ಅದರ ರಹಸ್ಯಗಳು ಎಷ್ಟಿರಬಹುದು? ಕಾಡು, ಬೆಟ್ಟ, ನದಿ, ಮಣ್ಣಿನೊಳಗೆ ಇನ್ನೂ ಅನೇಕ ಜೀವಿಗಳು ತಮ್ಮದೇ ಆದ ಜಗತ್ತಿನಲ್ಲಿ ಬದುಕುತ್ತಿವೆ. ಅಂತಹ ಅಚ್ಚರಿಯೊಂದನ್ನು ನಾಗಾಲ್ಯಾಂಡ್‌ನಲ್ಲಿ ವಿಜ್ಞಾನಿಗಳು ಇದೀಗ ಅನಾವರಣಗೊಳಿಸಿದ್ದಾರೆ. ಭಾರತದಲ್ಲೇ ಇದುವರೆಗೆ ಗುರುತಿಸಲಾದ ಅತಿ ದೊಡ್ಡ ಚುಚ್ಚದ ಜೇನುನೊಣದ ಹೊಸ ಪ್ರಭೇದವು ಭೂಮಿಯ ಆಳದಲ್ಲಿ ಗೂಡು ಕಟ್ಟುತ್ತದೆ ಎಂಬುದು ಈ ಸಂಶೋಧನೆಯ ವಿಶೇಷ.
ಪ್ರಕೃತಿಯಲ್ಲಿರುವ ಜೀವವೈವಿಧ್ಯದ ಕುರಿತು ನಮಗೆ ತಿಳಿದಿರುವುದು ಇನ್ನೂ ಅಪೂರ್ಣ ಎಂಬುದನ್ನು ಈ ಸಂಶೋಧನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಸುಮಾರು ಮೂರು ವರ್ಷಗಳ ಕಾಲ ನಡೆಸಿದ ಕ್ಷೇತ್ರ ಅಧ್ಯಯನದ ಬಳಿಕ, ವಿಜ್ಞಾನಿಗಳು ಭಾರತದಲ್ಲಿ ಇದುವರೆಗೆ ದಾಖಲಾದ ಅತಿ ದೊಡ್ಡ ಚುಚ್ಚದ ಜೇನುನೊಣ (Stingless Bee) ಪ್ರಭೇದವನ್ನು ಪತ್ತೆಹಚ್ಚಿದ್ದಾರೆ.
ಈ ಹೊಸ ಪ್ರಭೇದಕ್ಕೆ “ಟೆಟ್ರಾಗೊನುಲಾ ಯಿಖುಮೆನ್ಸಿಸ್” (Tetragonula yikhumensis) ಎಂದು ಹೆಸರಿಡಲಾಗಿದೆ. ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯ ಯಿಖುಮ್ ಗ್ರಾಮದಲ್ಲಿ ಮೊದಲ ಬಾರಿಗೆ ಇದರ ಗೂಡು ಪತ್ತೆಯಾದ ಕಾರಣ, ಆ ಗ್ರಾಮದ ಹೆಸರನ್ನೇ ವೈಜ್ಞಾನಿಕ ನಾಮಕರಣಕ್ಕೆ ಬಳಸಲಾಗಿದೆ.
ಸುಮಾರು ಅರ್ಧ ಸೆಂಟಿಮೀಟರ್‌ಗಿಂತ ಸ್ವಲ್ಪ ಹೆಚ್ಚಿನ ಉದ್ದ ಹೊಂದಿರುವ ಈ ಮಿಸರಿ ಭಾರತದಲ್ಲಿ ಈವರೆಗೆ ದಾಖಲಾದ ಚುಚ್ಚದ ಜೇನುನೊಣಗಳ ಪೈಕಿ ಅತಿ ದೊಡ್ಡದಾಗಿದೆ. ಆದರೆ ಇದರ ಅಚ್ಚರಿ ಗಾತ್ರದಲ್ಲಲ್ಲ, ಬದುಕುವ ರೀತಿಯಲ್ಲಿದೆ.
ಸಾಮಾನ್ಯವಾಗಿ ಚುಚ್ಚದ ಜೇನುನೊಣಗಳು ಮರದ ಪೊಟರೆ, ಗೋಡೆಯ ಬಿರುಕು ಅಥವಾ ಸುರಕ್ಷಿತ ಸ್ಥಳಗಳಲ್ಲಿ ಗೂಡು ಕಟ್ಟುತ್ತವೆ. ಆದರೆ ಈ ಹೊಸ ಪ್ರಭೇದವು ಸುಮಾರು ಎರಡು ಮೀಟರ್ ಆಳದ ಭೂಮಿಯೊಳಗೆ ತನ್ನ ವಸತಿ ನಿರ್ಮಿಸಿಕೊಳ್ಳುತ್ತದೆ. ಭಾರತದಲ್ಲಿ ಟೆಟ್ರಾಗೊನುಲಾ ಜಾತಿಗೆ ಸೇರಿದ ಭೂಗತ ಗೂಡು ಕಟ್ಟುವ ಎರಡನೇ ಪ್ರಭೇದ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.
ಇದರ ಗೂಡು ಕೂಡ ಅತ್ಯಂತ ವ್ಯವಸ್ಥಿತವಾಗಿದೆ. ಮರಿಗಳನ್ನು ಬೆಳೆಸಲು ಪ್ರತ್ಯೇಕ ಕೋಣೆಗಳು, ಜೇನು ಸಂಗ್ರಹಿಸಲು ಬೇರೆ ವಿಭಾಗ, ಹೂವಿನ ಪರಾಗವನ್ನು ಶೇಖರಿಸಲು ಮತ್ತೊಂದು ವಿಭಾಗ ಹೀಗೆ ಅತ್ಯಂತ ಸಂಘಟಿತ ರೀತಿಯಲ್ಲಿ ಗೂಡು ನಿರ್ಮಾಣ ಮಾಡಿರುವುದು ಈ ಪುಟ್ಟ ಜೀವಿಗಳ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತದೆ.
ಈ ಹೊಸ ಪತ್ತೆಯೊಂದಿಗೆ ಭಾರತದಲ್ಲಿ ದಾಖಲಾದ ಚುಚ್ಚದ ಜೇನುನೊಣಗಳ ಒಟ್ಟು ಪ್ರಭೇದಗಳ ಸಂಖ್ಯೆ 25ರಿಂದ 26ಕ್ಕೆ ಏರಿಕೆಯಾಗಿದೆ.
ಸಂಶೋಧಕರು ಸುದೀರ್ಘ ಕ್ಷೇತ್ರ ಸಮೀಕ್ಷೆ, ವೈಜ್ಞಾನಿಕ ವರ್ಗೀಕರಣ ಹಾಗೂ ಸೂಕ್ಷ್ಮ ಅಧ್ಯಯನಗಳ ಮೂಲಕ ಈ ಹೊಸ ಪ್ರಭೇದವನ್ನು ಗುರುತಿಸಿದ್ದಾರೆ. ಈ ಸಂಶೋಧನೆಯ ವಿವರಗಳು Socio Biology ಎಂಬ ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
ಪರಾಗಸ್ಪರ್ಶದ ಮೂಲಕ ಕೃಷಿ ಮತ್ತು ಅರಣ್ಯ ಪರಿಸರವನ್ನು ಉಳಿಸುವಲ್ಲಿ ಮಿಸರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಈ ಹೊಸ ಪ್ರಭೇದದ ಪತ್ತೆ ಕೇವಲ ಒಂದು ಹೊಸ ಜೀವಿಯ ಪರಿಚಯವಲ್ಲ, ಭಾರತದ ಜೀವವೈವಿಧ್ಯದ ಬಗ್ಗೆ ಇನ್ನೂ ಅನೇಕ ಅನ್ವೇಷಣೆಗಳು ಬಾಕಿಯಿವೆ ಎಂಬುದಕ್ಕೆ ಇದು ಬಲವಾದ ಸಾಕ್ಷಿಯಾಗಿದೆ.