ಟ್ರೇಡಿಂಗ್ ಆ್ಯಪ್ ಬಲೆಗೆ ಬಿದ್ದ ರೈತ; ವಿದೇಶಿ ನಂಬರ್‌ಗಳಿಂದ ಬಲೆ ಹೆಣೆದ ಖದೀಮರು
ಶಿರಸಿ: ಹೆಚ್ಚಿನ ಲಾಭದ ಆಸೆ ತೋರಿಸಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ನಕಲಿ ಟ್ರೇಡಿಂಗ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ₹73.72 ಲಕ್ಷ ವಂಚಿಸಿರುವ ಪ್ರಕರಣ ಉತ್ತರ ಕನ್ನಡ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ಮೂಲದ, ಪ್ರಸ್ತುತ ಶಿರಸಿಯ ಹುತ್ಗಾರ ಕ್ರಾಸ್‌ನಲ್ಲಿ ವಾಸವಾಗಿರುವ 76 ವರ್ಷದ ರೈತ ಬಸವರಾಜ್ ತೋಟದ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
2026ರ ಏಪ್ರಿಲ್ 24ರಂದು ಬಸವರಾಜ್ ಅವರು ಫೇಸ್‌ಬುಕ್ ಬಳಸುತ್ತಿದ್ದಾಗ ‘Finsol’ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬ ಸಂದೇಶ ಬಂದಿತ್ತು. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರು “813 Finsol Collective Private” ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿದ್ದರು.
ಅಲ್ಲಿ ‘ಅನನ್ಯಾ ಕುಲಕರ್ಣಿ’ ಎಂಬ ಹೆಸರಿನ ವ್ಯಕ್ತಿ ಸೇರಿದಂತೆ +91 8401930289, +44 7549417462, +44 7394488432, +44 7743789806 ಸಂಖ್ಯೆಗಳ ಮೂಲಕ ಸಂಪರ್ಕದಲ್ಲಿದ್ದವರು ತಮ್ಮನ್ನು ಟ್ರೇಡಿಂಗ್ ತಜ್ಞರು ಎಂದು ಪರಿಚಯಿಸಿಕೊಂಡಿದ್ದರು. “Finsol Sarathi Plan” ಮೂಲಕ ಹಣ ಹೂಡಿಕೆ ಮಾಡಿದರೆ ಭಾರೀ ಲಾಭ ಸಿಗುತ್ತದೆ ಎಂದು ನಂಬಿಸಿ, ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ.
ಏಪ್ರಿಲ್ 27ರಿಂದ ಜೂನ್ 15ರವರೆಗೆ ಒಟ್ಟು ₹73,72,090 ಹಣವನ್ನು ವರ್ಗಾವಣೆ ಮಾಡಿದ್ದರೂ, ಹೂಡಿಕೆಯ ಲಾಭವೂ ಸಿಗಲಿಲ್ಲ, ಮೂಲ ಹಣವೂ ಮರಳಿ ಬಂದಿಲ್ಲ. ವಂಚನೆಯಾಗಿರುವುದು ಅರಿವಾದ ಬಳಿಕ ಬಸವರಾಜ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ “ಕಡಿಮೆ ಹೂಡಿಕೆ – ಹೆಚ್ಚು ಲಾಭ” ಎಂಬ ಆಮಿಷ ತೋರಿಸುವ ಜಾಹೀರಾತುಗಳು ಮತ್ತು ವಾಟ್ಸಾಪ್ ಹೂಡಿಕೆ ಗ್ರೂಪ್‌ಗಳನ್ನು ಸುಲಭವಾಗಿ ನಂಬಬೇಡಿ. ಹೂಡಿಕೆ ಮಾಡುವ ಮೊದಲು ಸಂಸ್ಥೆಯ ಅಧಿಕೃತ ನೋಂದಣಿ, ನಿಯಂತ್ರಕ ಸಂಸ್ಥೆಗಳ ಅನುಮತಿ ಹಾಗೂ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ಅಪರಿಚಿತರ ಸಲಹೆಯ ಮೇರೆಗೆ ಹಣ ವರ್ಗಾಯಿಸುವ ಮುನ್ನ ಒಮ್ಮೆ ಯೋಚಿಸುವುದು ಲಕ್ಷಾಂತರ ರೂಪಾಯಿ ಉಳಿಸಬಹುದು.