ಶಿರಸಿ: ಕ್ಷುಲ್ಲಕ ವೈಯಕ್ತಿಕ ವಿಚಾರವೊಂದು ವಿಕೋಪಕ್ಕೆ ತಿರುಗಿ, ಸಾರ್ವಜನಿಕ ರಸ್ತೆಯಲ್ಲೇ ಎಂಟು ಜನ ಯುವಕರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡ ಘಟನೆ ಶನಿವಾರ ಸಂಜೆ ಶಿರಸಿ ನಗರದ ಬಿಡ್ಕಿ ಸರ್ಕಲ್ ಸಮೀಪದ ಉಡುಪಿ ಹೋಟೆಲ್ ಎದುರು ನಡೆದಿದೆ.
ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡಿದ ಆರೋಪದಡಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಆಗಸ್ಟ್ 1ರಂದು ಸಂಜೆ ಸುಮಾರು 6.30ರ ವೇಳೆಗೆ ಬಿಡ್ಕಿ ಸರ್ಕಲ್ನ ಉಡುಪಿ ಹೋಟೆಲ್ ಬಳಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ಆರಂಭವಾಗಿ, ಅದು ಹೊಡೆದಾಟಕ್ಕೆ ತಿರುಗಿದೆ. ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ಕೈಯಿಂದ ಹೊಡೆದಾಡಿಕೊಂಡ ಪರಿಣಾಮ ಅಲ್ಲಿದ್ದ ಜನರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.
ಪ್ರಕರಣದಲ್ಲಿ ಆರೆಕೊಪ್ಪದ ಮಂಜುನಾಥ ಬಸವರಾಜ ಜಗ್ಲೆರ (ಸೆಂಟ್ರಿಂಗ್ ಕೆಲಸ), ಬನವಾಸಿಯ ಗಿರೀಶ ಚಂದ್ರಶೇಖರ ದೇವಾಡಿಗ (ರೈತ), ಬಚಗಾಂವದ ಗಣೇಶ ಯೋಗೇಂದ್ರ ಮಡಿವಾಳ (ವಿದ್ಯಾರ್ಥಿ), ಕೊರ್ಲಕಟ್ಟದ ನಾಗರಾಜ ಪರಶುರಾಮ ತಳವಾರ (ಗೌಂಡಿ ಕೆಲಸ), ವಡ್ಡಿನಕೊಪ್ಪ, ಕೊರ್ಲಕಟ್ಟದ ಮಾರುತಿ ಪರಶುರಾಮ ತಳವಾರ (ಗೌಂಡಿ ಕೆಲಸ), ಬೆಂಗಳೆಯ ಮಯೂರ ಶೇಖರ ಉಪ್ಪಾರ (ಹೋಟೆಲ್ ಸಪ್ಲೈಯರ್), ಶಿವಳ್ಳಿ-ಬಪ್ಪನಳ್ಳಿಯ ವಿನಾಯಕ ನರಸಿಂಹ ದೇವಾಡಿಗ (ಹೋಟೆಲ್ ಮ್ಯಾನೇಜರ್) ಹಾಗೂ ಮರಾಠಿಕೊಪ್ಪದ ಚರಣ ವಿನೋದ ಭಂಡಾರಿ (ಸಪ್ಲೈಯರ್ ಕೆಲಸ) ಆರೋಪಿಗಳಾಗಿದ್ದಾರೆ.
ಘಟನೆಯ ಬಗ್ಗೆ ಸಹಾಯಕ ಪೊಲೀಸ್ ಉಪನಿರೀಕ್ಷಕ ನೆಲ್ಸನ್ ಆರ್. ಮೆಂತೆರೋ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಉಂಟುಮಾಡುವ ರೀತಿಯ ವರ್ತನೆ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.