Monday, September 7, 2026
Join WhatsApp Group
HomeCrime₹3.94 ಲಕ್ಷ ಕೊಟ್ಟರೂ ಸೋಲಾರ್ ಪ್ಯಾನಲ್ ಬರಲಿಲ್ಲ!

₹3.94 ಲಕ್ಷ ಕೊಟ್ಟರೂ ಸೋಲಾರ್ ಪ್ಯಾನಲ್ ಬರಲಿಲ್ಲ!

ಗೂಗಲ್‌ನಲ್ಲಿ ಸಿಕ್ಕ ‘ಸೂಪರ್ ಆಫರ್’ ನಂಬಿ ಮೋಸ

ಕಾರವಾರ: ʼಮಾರುಕಟ್ಟೆಗಿಂತ ಅಗ್ಗದ ದರದಲ್ಲಿ ಸೋಲಾರ್ ಪ್ಯಾನಲ್ ಕೊಡುತ್ತೇವೆʼ ಎಂಬ ಆಕರ್ಷಕ ಆಫರ್‌ ನಂಬಿ ₹3.94 ಲಕ್ಷ ಪಾವತಿಸಿದ ಮಹಿಳೆಯೊಬ್ಬರು ಕೊನೆಗೆ ಹಣವನ್ನೂ ಕಳೆದುಕೊಂಡು, ಪ್ಯಾನಲ್ ಕೂಡ ಸಿಗದೇ ಸೈಬರ್ ವಂಚನೆಯ ಬಲೆಗೆ ಬಿದ್ದಿದ್ದಾರೆ. ಈ ಸಂಬಂಧ ಉತ್ತರ ಕನ್ನಡ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಮೂಲದ, ಪ್ರಸ್ತುತ ಕಾರವಾರದ ಅಮದಳ್ಳಿಯಲ್ಲಿ ವಾಸವಾಗಿರುವ ಜಯಾ ಸೂರ್ಯವಂಶಿ (28) ಅವರು ತಮ್ಮ ಕುಟುಂಬದ ಸೋಲಾರ್ ವ್ಯವಹಾರಕ್ಕಾಗಿ ಕಡಿಮೆ ದರದಲ್ಲಿ ಪ್ಯಾನಲ್ ಖರೀದಿಸಲು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದರು.

ಆ ವೇಳೆ “AMPGURUX Technologies (OPC) Private Limited” ಎಂಬ ಸಂಸ್ಥೆಯ ಜಾಹೀರಾತು ಕಣ್ಣಿಗೆ ಬಿದ್ದಿದೆ. “ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸೋಲಾರ್ ಪ್ಯಾನಲ್” ಎಂಬ ಭರವಸೆ ಕಂಡು ಅವರು ಸಂಪರ್ಕಿಸಿದಾಗ, ತನ್ನನ್ನು ಸಂಸ್ಥೆಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ 30 ಸೋಲಾರ್ ಪ್ಯಾನಲ್‌ಗಳನ್ನು ಪ್ರತಿ ಪ್ಯಾನಲ್‌ಗೆ ₹12,528 ದರದಲ್ಲಿ ನೀಡುವುದಾಗಿ ಹೇಳಿದ್ದಾನೆ.

ಒಟ್ಟು ₹3,94,632 ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ ಬಳಿಕವೇ ಕಥೆ ತಿರುವು ಪಡೆದುಕೊಂಡಿದೆ. ಹಣ ಹೋದ ನಂತರ ಪ್ಯಾನಲ್ ಬಂದಿಲ್ಲ. ಕರೆಗಳಿಗೆ ಸರಿಯಾಗಿ ಪ್ರತಿಕ್ರಿಯೆಯೂ ಇಲ್ಲ. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾದ ಜಯಾ ಸೂರ್ಯವಂಶಿ ಅವರು ಉತ್ತರ ಕನ್ನಡ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

‘ಅಗ್ಗದ ಆಫರ್’ಗೆ ಮರುಳಾಗಬೇಡಿ!

ಸೈಬರ್ ತಜ್ಞರ ಪ್ರಕಾರ, ಗೂಗಲ್‌ನಲ್ಲಿ ಕಾಣಿಸುವ ಪ್ರತಿಯೊಂದು ಜಾಹೀರಾತು ಅಥವಾ ವೆಬ್‌ಸೈಟ್ ವಿಶ್ವಾಸಾರ್ಹವೇ ಎಂಬುದು ಖಚಿತವಲ್ಲ. ಅಪರಿಚಿತ ಕಂಪನಿಗಳಿಗೆ ದೊಡ್ಡ ಮೊತ್ತದ ಹಣ ವರ್ಗಾಯಿಸುವ ಮುನ್ನ ಈ ಕ್ರಮಗಳನ್ನು ಪಾಲಿಸುವುದು ಸುರಕ್ಷಿತ:

  • ಕಂಪನಿಯ GST, CIN, ಅಧಿಕೃತ ವೆಬ್‌ಸೈಟ್ ಮತ್ತು ವಿಳಾಸ ಪರಿಶೀಲಿಸಿ.
  • ಕೇವಲ ಮೊಬೈಲ್ ಸಂಖ್ಯೆ ಅಥವಾ ವಾಟ್ಸ್ಆ್ಯಪ್ ಚಾಟ್ ನಂಬಿ ಹಣ ಕಳುಹಿಸಬೇಡಿ.
  • ಆನ್‌ಲೈನ್ ವಿಮರ್ಶೆಗಳು (Reviews) ಮತ್ತು ಗ್ರಾಹಕರ ಅನುಭವಗಳನ್ನು ಪರಿಶೀಲಿಸಿ.
  • ಸಾಧ್ಯವಾದರೆ ಕಚೇರಿಗೆ ಭೇಟಿ ನೀಡಿ ಅಥವಾ ವಿಡಿಯೊ ಪರಿಶೀಲನೆ ಮಾಡಿ.
  • “ಇವತ್ತೇ ಹಣ ಕೊಟ್ಟರೆ ಮಾತ್ರ ಆಫರ್” ಎಂಬ ಒತ್ತಡದ ಮಾತುಗಳು ಕೇಳಿಬಂದರೆ ಎಚ್ಚರವಾಗಿರಿ.
Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share