ಶಿರಸಿ: ಗುರುಕುಲದಲ್ಲಿ ಪಡೆದ ವಿದ್ಯೆಯ ಬಗ್ಗೆ ಶ್ರದ್ಧೆ ಮತ್ತು ಕೃತಜ್ಞತೆಯ ಭಾವವನ್ನು ಜೀವನಪರ್ಯಂತ ಉಳಿಸಿಕೊಂಡು, ನಿರಂತರ ಸ್ವಾಧ್ಯಾಯ ಹಾಗೂ ಧರ್ಮಾಚರಣೆಯ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಸ್ವರ್ಣವಲ್ಲೀ ಶ್ರೀಮಠದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 36ನೇ ಚಾತುರ್ಮಾಸ್ಯ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ 3ನೇ ಚಾತುರ್ಮಾಸ್ಯದ ಅಂಗವಾಗಿ ಮಠದ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಭಿಕ್ಷಾಸೇವೆ ಮತ್ತು ಪಾದಪೂಜೆ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ದೂರದ ಊರುಗಳಿಂದ ಶ್ರೀಮಠಕ್ಕೆ ಆಗಮಿಸಿ ಗುರುಸೇವೆಯಲ್ಲಿ ಪಾಲ್ಗೊಳ್ಳುವುದು ಶ್ರದ್ಧೆಯ ಪ್ರತೀಕವಾಗಿದೆ. ಅದರೊಂದಿಗೆ ಗುರುಕುಲದಲ್ಲಿ ಪಡೆದ ವಿದ್ಯೆಯ ಬಗ್ಗೆ ಕೃತಜ್ಞತೆಯ ಭಾವವೂ ಅಷ್ಟೇ ಮಹತ್ವದ್ದಾಗಿದೆ. ಈ ಪರಂಪರೆ ಮುಂದುವರಿಯಬೇಕಾದರೆ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಪ್ರತಿವರ್ಷವೂ ಮಠಕ್ಕೆ ಆಗಮಿಸಿ ಗುರುಸೇವೆ ಹಾಗೂ ಧರ್ಮಸೇವೆಯಲ್ಲಿ ಭಾಗವಹಿಸಬೇಕು. ಇದೇ ಮಾನವನ ಆತ್ಮೋನ್ನತಿಗೆ ದಾರಿಯಾಗುತ್ತದೆ ಎಂದು ಶ್ರೀಗಳು ಹೇಳಿದರು.
ಜೀವನದಲ್ಲಿ ಪಡೆದ ಜ್ಞಾನವನ್ನು ನಿರಂತರ ಸ್ವಾಧ್ಯಾಯದ ಮೂಲಕ ವೃದ್ಧಿಸಿಕೊಳ್ಳಬೇಕು. ಗುರುಗಳ ಆಶೀರ್ವಾದ, ಧರ್ಮನಿಷ್ಠೆ ಮತ್ತು ವಿದ್ಯೆಯ ಮೇಲಿನ ಶ್ರದ್ಧೆ ವ್ಯಕ್ತಿಯ ಬದುಕಿಗೆ ದಿಕ್ಕು ತೋರುವ ಶಕ್ತಿಯಾಗುತ್ತದೆ ಎಂದು ಶ್ರೀಗಳು ಕರೆ ನೀಡಿದರು.