ಜಿಲ್ಲಾಧಿಕಾರಿಗೆ ನಾಗರಿಕ ವೇದಿಕೆ ಮನವಿ
ಯಲ್ಲಾಪುರ: ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತ ಹೊಸದಾಗಿ ಕಲ್ಲುಕ್ವಾರಿ (ಗಣಿಗಾರಿಕೆ) ಆರಂಭಿಸಲು ಯಾವುದೇ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಯಲ್ಲಾಪುರ ನಾಗರಿಕ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲಾ, ಜೋಯಿಡಾ ಹಾಗೂ ಕಾರವಾರ ತಾಲೂಕುಗಳ ಗಡಿಭಾಗದಲ್ಲಿರುವ ಕೈಗಾ ಪ್ರದೇಶದಲ್ಲಿ ಈಗಾಗಲೇ ನಾಲ್ಕು ಅಣು ವಿದ್ಯುತ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಐದನೇ ಹಾಗೂ ಆರನೇ ಘಟಕಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಇದೀಗ ನಿರ್ಮಾಣವಾಗುವ ಕಾಮಗಾರಿಗೆ ಅಗತ್ಯವಿರುವ ಜಲ್ಲಿಕಲ್ಲು ಪಡೆಯುವ ಉದ್ದೇಶದಿಂದ ನಿಷೇಧಿತ ವಲಯದಲ್ಲೇ ಹೊಸ ಕಲ್ಲುಕ್ವಾರಿ ಆರಂಭಿಸಲು ಖಾಸಗಿ ಸಂಸ್ಥೆ ಮುಂದಾಗಿದೆ ಎಂಬ ಮಾಹಿತಿ ಲಭಿಸಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದೆ.
ಅಣು ವಿದ್ಯುತ್ ಸ್ಥಾವರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಬೆಟ್ಟ-ಗುಡ್ಡಗಳನ್ನು ಸ್ಫೋಟಿಸಿ ಕಲ್ಲು ತೆಗೆಯುವಂತಹ ಚಟುವಟಿಕೆಗಳಿಗೆ ಅವಕಾಶ ನೀಡುವುದು ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಮನವಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಗಣಿಗಾರಿಕೆ ಆರಂಭವಾದರೆ ದೊಡ್ಡ ಪ್ರಮಾಣದಲ್ಲಿ ಹೊರಗಿನಿಂದ ಕಾರ್ಮಿಕರು ಹಾಗೂ ಸಿಬ್ಬಂದಿ ಆಗಮಿಸುವ ಸಾಧ್ಯತೆ ಇದೆ. ಇದು ಭದ್ರತಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದಾದ ಕಾರಣ ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಇದರ ಜೊತೆಗೆ ಗಣಿಗಾರಿಕೆಯಿಂದ ಪರಿಸರ ಹಾನಿ, ಮಣ್ಣು ಸಡಿಲಿಕೆ, ಅರಣ್ಯ ನಾಶ ಹಾಗೂ ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಕೈಗಾ ಅಣುಸ್ಥಾವರದಂತಹ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಸಣ್ಣ ಲೋಪವೂ ಜಿಲ್ಲೆಯ ಭದ್ರತೆ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ನಾಗರಿಕ ವೇದಿಕೆ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯ್ಕ ಮೊಗಟಾ, ನಿವೃತ್ತ ತಹಸೀಲ್ದಾರ ಡಿ.ಜಿ. ಹೆಗಡೆ, ವಿಎಚ್ಪಿ ಅಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ, ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಜಯ ಮರಾಠಿ, ಸಾಮಾಜಿಕ ಕಾರ್ಯಕರ್ತ ಗಣಪತಿ ಬೋಳಗುಡ್ಡೆ, ಜಗನ್ನಾಥ ರೇವಣಕರ, ರಜನಿ ಚಂದ್ರಶೇಖರ, ದಾಸಿಂತ್ ಫರ್ನಾಂಡಿಸ್, ಮಹಾದೇವಚಂದ್ರ ಪಂಡರಾಪುರ, ಟಿ. ಶಂಕರ ಭಟ್, ಕೆ.ಎಸ್. ಭಟ್ಟ, ಸುಬ್ರಾಯ ಬಿದ್ರೆಮನೆ, ಮುಷಾಕ್ ಅಹಮದ್, ಖಾಜಾ ಮೈನುದ್ದಿನ್ ಅತ್ತಾರ, ಉಲ್ಲಾಸ ಮರಾಠೆ, ಅಶೋಕ ಹೆಗಡೆ, ತಿಮ್ಮಣ್ಣ ಶಂಕರ ಭಟ್ಟ, ನಾಗರಾಜ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.