ಮೈಲುತುತ್ತದ ಮೇಲಿನ ಜಿಎಸ್‌ಟಿ ಇಳಿಕೆಗೆ ಮನವಿ
ನವದೆಹಲಿ: ರಾಜ್ಯದ ಸಂಸದರು, ಕ್ಯಾಂಪ್ಕೋ ಹಾಗೂ ಅಡಿಕೆ ಮಹಾಮಂಡಳದ ಪ್ರತಿನಿಧಿಗಳ ನಿಯೋಗವು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರರು ಹಾಗೂ ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿತು.
ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಅರಗ ಜ್ಞಾನೇಂದ್ರ, ಅಡಿಕೆ ಮಹಾಮಂಡಳದ ಅಧ್ಯಕ್ಷರು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್‌ಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಉಪಸ್ಥಿತರಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಸಭೆಯಲ್ಲಿ, ಕನಿಷ್ಠ ಆಮದು ಬೆಲೆ (MIP) ನಿಯಮಗಳನ್ನು ಉಲ್ಲಂಘಿಸಿ ಸುಂಕ ರಹಿತವಾಗಿ ದೇಶದೊಳಗೆ ಅಕ್ರಮವಾಗಿ ಆಮದು ಆಗುತ್ತಿರುವ ಕಡಿಮೆ ಮೌಲ್ಯದ ಅಡಿಕೆಯಿಂದ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತಿರುವುದನ್ನು ಗಂಭೀರವಾಗಿ ಪ್ರಸ್ತಾಪಿಸಲಾಯಿತು. ಅಕ್ರಮ ಆಮದಿಗೆ ತಕ್ಷಣವೇ ಕಡಿವಾಣ ಹಾಕುವಂತೆ ನಿಯೋಗ ಆಗ್ರಹಿಸಿತು.
ಇದರ ಜೊತೆಗೆ, ‘ಒಂದು ದೇಶ, ಒಂದು ತೆರಿಗೆ’ ಪರಿಕಲ್ಪನೆಯಂತೆ ಸಹಕಾರ ಸಂಸ್ಥೆಗಳ ಮೇಲಿರುವ ಹೆಚ್ಚುವರಿ ಸ್ಥಳೀಯ ತೆರಿಗೆ ಹೊರೆಯನ್ನು ತೆರವುಗೊಳಿಸಿ, ಖಾಸಗಿ ವ್ಯಾಪಾರಿಗಳೊಂದಿಗೆ ಸಮಾನ ಸ್ಪರ್ಧೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಯಿತು. ಈ ಸಂಬಂಧ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಮಿತ್ ಶಾ ಭರವಸೆ ನೀಡಿದರು.
ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ನಿಯೋಗವು, ಅಡಿಕೆ ತೋಟಗಳಲ್ಲಿ ಶಿಲೀಂಧ್ರನಾಶಕವಾಗಿ ವ್ಯಾಪಕವಾಗಿ ಬಳಸುವ ಕಾಪರ್ ಸಲ್ಫೇಟ್ (ಮೈಲುತುತ್ತ) ಮೇಲಿನ ಜಿಎಸ್‌ಟಿ ದರವನ್ನು ಹಾಲಿ ಶೇ.18ರಿಂದ ಶೇ.5ಕ್ಕೆ ಇಳಿಸುವಂತೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಹಣಕಾಸು ಸಚಿವೆ, ಅಕ್ರಮ ಅಡಿಕೆ ಆಮದನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ದೇಶದ ವಿವಿಧ ಬಂದರುಗಳಲ್ಲಿ ತಪಾಸಣೆ ಹಾಗೂ ನಿಗಾವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಡಿಕೆ ಬೆಳೆಗಾರರ ಹಿತಾಸಕ್ತಿ ಹಾಗೂ ಸಹಕಾರ ಸಂಸ್ಥೆಗಳ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಿಯೋಗವು ಕೃತಜ್ಞತೆ ಸಲ್ಲಿಸಿತು.