ವೈದ್ಯಕೀಯ ಪರೀಕ್ಷೆಯಲ್ಲಿ ಸತ್ಯ ಬಯಲು!
ಹಳಿಯಾಳ: ಆತ ಎಪಿಎಂಸಿ ಬಳಿ ನಿಂತಿದ್ದ. ಏನೋ ಮಾತು, ಏನೋ ಗಲಾಟೆ… ಅದರ ನಡುವೆ ಸುಮ್ಮನೆ ನಗುತ್ತಿದ್ದ! ಪೊಲೀಸರಿಗೆ ಮಾತ್ರ ಈ ನಗು ಅಷ್ಟೊಂದು ಸಾಮಾನ್ಯವಾಗಿ ಕಾಣಲಿಲ್ಲ. ವಿಚಾರಿಸಿದಾಗ ವ್ಯಕ್ತಿಯೇ ಗಾಂಜಾ ಸೇವಿಸಿರುವುದಾಗಿ ಹೇಳಿದ್ದಾನೆ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ, ಅನುಮಾನಕ್ಕೆ ವೈದ್ಯಕೀಯ ವರದಿಯೂ ಮುದ್ರೆ ಒತ್ತಿದೆ.
ಹಳಿಯಾಳ ನಗರದ ಎಪಿಎಂಸಿ ಸಮೀಪ ಆಗಸ್ಟ್ 7ರಂದು ರಾತ್ರಿ ಸುಮಾರು 8.40ರ ವೇಳೆಗೆ ಈ ಘಟನೆ ನಡೆದಿದೆ. ಗಸ್ತು ಕರ್ತವ್ಯದಲ್ಲಿದ್ದ ಹಳಿಯಾಳ ವೃತ್ತದ ಸಿಪಿಐ ಜಯಪಾಲ್ ಪಾಟೀಲ್ ಹಾಗೂ ಸಿಬ್ಬಂದಿ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯವಾಗಿ ಬೈಯುತ್ತಾ, ನಗುತ್ತಾ ಗಲಾಟೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗಮನಿಸಿದ್ದಾರೆ.
ಪೊಲೀಸರು ಆತನ ಬಳಿ ತೆರಳಿ ವಿಚಾರಿಸಿದಾಗ, ಹೊಸವಟ್ನಾಳ ಗ್ರಾಮದ 28 ವರ್ಷದ ಕಾಸೀಮ್ ಮಾಹಬೂಬಸಾಬ ಮುನವಳ್ಳಿ ಎಂಬಾತ ತಾನು ಗಾಂಜಾ ಸೇವಿಸಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಆತನನ್ನು ಠಾಣೆಗೆ ಕರೆತಂದು, ಗಾಂಜಾ ಸೇವನೆ ಮಾಡಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಳಿಯಾಳ ತಾಲೂಕು ಆಸ್ಪತ್ರೆಗೆ ಕಳುಹಿಸಿದ್ದಾರೆ.
ವೈದ್ಯಾಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಕಾಸೀಮ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದುಕೊಂಡ ಪೊಲೀಸರು ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.