ಉಪಳೇಶ್ವರ ಭಾಗದ ವಿದ್ಯಾರ್ಥಿಗಳ ನಿತ್ಯದ ಪರದಾಟ
ಯಲ್ಲಾಪುರ: ಬೆಳಗ್ಗೆ ಪುಸ್ತಕದ ಚೀಲ ಹಿಡಿದು ರಸ್ತೆ ಬದಿಯಲ್ಲಿ ನಿಲ್ಲುವ ವಿದ್ಯಾರ್ಥಿಗಳ ಕಣ್ಣು ಬಸ್‌ಗಾಗಿ ಕಾಯುತ್ತಿರುತ್ತದೆ. ದೂರದಿಂದ ಬಸ್ ಕಾಣಿಸಿದರೆ ‘ಇಂದು ಹತ್ತಲು ಜಾಗ ಸಿಗಬಹುದೇ?’ ಎಂಬ ಆತಂಕ. ಬಸ್ ನಿಂತರೆ ಹೇಗಾದರೂ ಹತ್ತಬೇಕು, ನಿಲ್ಲದಿದ್ದರೆ ಮುಂದಿನ ಬಸ್‌ಗಾಗಿ ಮತ್ತೆ ಕಾಯಬೇಕು. ಈ ನಡುವೆ ಶಾಲೆ-ಕಾಲೇಜಿನ ಬೆಲ್ ಮಾತ್ರ ವಿದ್ಯಾರ್ಥಿಗಳಿಗಾಗಿ ಕಾಯುವುದಿಲ್ಲ! ತಾಲೂಕಿನ ಉಪಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳ ನಿತ್ಯದ ಬಸ್ ಬವಣೆ ಇದು.
ಮಳಲಗಾಂವ್, ಜಂಬೆಸಾಲ್, ಉಪಳೇಶ್ವರ, ಹುತ್ಕಂಡ ಹಾಗೂ ಸವಣಗೇರಿ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಯಲ್ಲಾಪುರದ ಶಾಲೆ-ಕಾಲೇಜುಗಳಿಗೆ ಓಡಾಡುತ್ತಾರೆ. ಇವರಿಗೆ ಸಾರಿಗೆ ವ್ಯವಸ್ಥೆಯೇ ಸವಾಲಾಗಿ ಪರಿಣಮಿಸುತ್ತಿದೆ.
ಶಿರಸಿ ಕಡೆಯಿಂದ ಬರುವ ಬಸ್‌ಗಳು ಉಪಳೇಶ್ವರ ತಲುಪುವಷ್ಟರಲ್ಲಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತದೆ. ವಿದ್ಯಾರ್ಥಿಗಳಿಗೆ ಸಮರ್ಪಕ ನಿಲುಗಡೆಯೂ ಸಿಗುತ್ತಿಲ್ಲ. ಕೆಲವೊಮ್ಮೆ ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹೀಗಾಗಿ ಶಾಲೆ-ಕಾಲೇಜಿಗೆ ಸಮಯಕ್ಕೆ ತಲುಪುವುದು ಕಷ್ಟವಾಗುತ್ತಿದೆ. ಸಂಜೆ ವಾಪಸ್ ಬರುವಾಗಲೂ ಇದೇ ಪರಿಸ್ಥಿತಿ. ದಿನದ ಪಾಠ ಮುಗಿಸಿ ಮನೆ ಸೇರುವ ವೇಳೆಗೆ ಮತ್ತಷ್ಟು ತಡವಾಗುತ್ತಿದೆ.
ಇನ್ನು, ಶಿರಸಿಯಿಂದ ಹೊರಟ ವೇಗದೂತ ಬಸ್‌ಗಳು ಮಂಚಿಕೇರಿ ದಾಟಿದ ನಂತರ ತೂಕದಬೈಲ್, ಮಳಲಗಾಂವ್‌ಗಳಲ್ಲಿ ನಿಲ್ಲಿಸುವುದಿಲ್ಲ. ಅಲ್ಲಿನ ವಿದ್ಯಾರ್ಥಿಗಳು ಕೂಡ ಸಿಟಿ ಬಸ್‌ನ ಬರುವಿಕೆಯನ್ನೇ ಎದುರು ನೋಡಬೇಕಾಗಿದೆ.
‘ಪ್ರತ್ಯೇಕ ಬಸ್ ಬೇಕು’ ಎನ್ನುವುದು ವಿದ್ಯಾರ್ಥಿಗಳ ಹೊಸ ಬೇಡಿಕೆಯಲ್ಲ. ಈ ಕುರಿತು ಬಸ್ ಘಟಕದ ವ್ಯವಸ್ಥಾಪಕರಿಗೆ ಈಗಾಗಲೇ ಮೂರ್ನಾಲ್ಕು ಬಾರಿ ಮನವಿ ಸಲ್ಲಿಸಲಾಗಿದೆ. ಪಾಲಕರೂ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸಮಸ್ಯೆ ಪೊಲೀಸ್ ಇಲಾಖೆಯ ಗಮನಕ್ಕೂ ಹೋಗಿದ್ದು, ಪರಿಹಾರ ಕಲ್ಪಿಸುವಂತೆ ಪಿಎಸ್‌ಐ ಅವರು ಘಟಕ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ.
ಈ ಮನವಿಗಳಿಗೆ ಸ್ಪಂದಿಸಿದ್ದ ಘಟಕ ವ್ಯವಸ್ಥಾಪಕರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಗ್ಗೆ ಹಾಗೂ ಸಂಜೆ ಶಾಲಾ-ಕಾಲೇಜು ಸಮಯಕ್ಕೆ ಪ್ರತ್ಯೇಕ ಬಸ್ ಓಡಿಸುವ ಭರವಸೆ ನೀಡಿದ್ದರು. ಆದರೆ ಆ ಭರವಸೆ ನೀಡಿ ವಾರಗಳು ಕಳೆದರೂ ಪ್ರತ್ಯೇಕ ಬಸ್ ಮಾತ್ರ ಆರಂಭವಾಗಿಲ್ಲ.
ಹೀಗಾಗಿ ವಿದ್ಯಾರ್ಥಿಗಳ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ಬಸ್‌ಗಾಗಿ ಕಾಯುವುದು, ನಿಲುಗಡೆ ಸಿಕ್ಕ ಬಸ್‌ನಲ್ಲಿ ಜಾಗಕ್ಕಾಗಿ ಪರದಾಡುವುದು, ಕೆಲವೊಮ್ಮೆ ಅಪಾಯವನ್ನೂ ಲೆಕ್ಕಿಸದೆ ನೇತಾಡಿಕೊಂಡು ಪ್ರಯಾಣಿಸುವುದು ಸಾಮಾನ್ಯವೆಂಬಂತಾಗಿದೆ.
ಶಿಕ್ಷಣವೇ ಶಕ್ತಿ, ಯುವಕರೇ ದೇಶದ ಬೆನ್ನೆಲುಬು ಎಂದೆಲ್ಲ ಸಾಲು ಸಾಲು ಮುತ್ತು ಉದುರಿಸುವ ನಮ್ಮ ಆಡಳಿತ, ಇಲಾಖೆಗಳು ಅದೇ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ತಲುಪಲು ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲೂ ವಿಫಲವಾಗುತ್ತಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.