Monday, September 7, 2026
Join WhatsApp Group
HomeInformationSpecialಕಡಿಮೆ ಮಾರ್ಕ್ಸ್‌ ಪಡೆದ ಮಕ್ಕಳನ್ನು ದೂರಬೇಡಿ!

ಕಡಿಮೆ ಮಾರ್ಕ್ಸ್‌ ಪಡೆದ ಮಕ್ಕಳನ್ನು ದೂರಬೇಡಿ!

ಆತನೊಳಗೊಬ್ಬ ಸಂಶೋಧಕ, ಕಲಾವಿದ, ವಿಜ್ಞಾನಿಯೂ ಇರಬಹುದು

ಶಾಲೆಯಿಂದ ಮರಳಿದ ಮಗುವಿನ ಕೈಯಲ್ಲಿ ಅಂಕಪಟ್ಟಿ ಇರುತ್ತದೆ. ಅದರಲ್ಲಿ 95, 90, 85 ಅಂಕಗಳು ಬಂದರೆ ಮನೆಯಲ್ಲಿ ಸಂಭ್ರಮ. 60 ಬಂದರೆ ಇನ್ನಷ್ಟು ಓದಬೇಕು ಎಂಬ ಸಲಹೆ. 40 ಬಂದರೆ ಆತಂಕ. ದಡ್ಡ, ಓದು ತಲೆಗೆ ಹತ್ತದವನು ಎಂಬ ಮೂದಲಿಕೆಯೂ ಹೊರಬಹುತ್ತದೆ.

ಆದರೆ ನಾವು ಬಹಳ ಅಪರೂಪಕ್ಕೆ ಕೇಳುವ ಒಂದು ಪ್ರಶ್ನೆಯಿದೆ. ʻನಿನಗೆ ಓದಿನ ಹೊರತಾಗಿ ಇನ್ನೇನಿಷ್ಟ?ʼ ಮಕ್ಕಳ ಪ್ರತಿಭೆಯನ್ನು ಅಂಕಗಳ ಅಳತೆಯಿಂದಲೇ ಅಳೆಯುವ ಈ ಕಾಲದಲ್ಲಿ, ಸುಮಾರು ನೂರು ವರ್ಷಗಳ ಹಿಂದಿನ ಒಬ್ಬ ಭಾರತೀಯನ ಕಥೆ ನಮ್ಮನ್ನು ಸ್ವಲ್ಪ ನಿಲ್ಲಿಸಿ ಯೋಚಿಸುವಂತೆ ಮಾಡುತ್ತದೆ.

ಶಾಲಾ ಶಿಕ್ಷಣ ಹೆಚ್ಚು ಮುಂದುವರಿಯಲಿಲ್ಲ. ಆದರೆ ಯಂತ್ರಗಳ ಬಗ್ಗೆ ಇದ್ದ ಕುತೂಹಲ ಮಾತ್ರ ಎಂದಿಗೂ ಕಡಿಮೆಯಾಗಲಿಲ್ಲ. ಪುಸ್ತಕದ ಪರೀಕ್ಷೆಯಲ್ಲಿ ಎಷ್ಟು ಅಂಕ ಬಂದವು ಎನ್ನುವುದಕ್ಕಿಂತ, ʻಇದು ಹೀಗೆ ಕೆಲಸ ಮಾಡುವುದು ಹೇಗೆ?ʻ ಎಂಬ ಪ್ರಶ್ನೆ ಅವರ ಬದುಕನ್ನು ಮುನ್ನಡೆಸಿತು. ಅವರೇ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು. ಎಲ್ಲರೂ ಪ್ರೀತಿಯಿಂದ ಕರೆಯುವ ಜಿ.ಡಿ. ನಾಯ್ಡು.

1893ರ ಮಾರ್ಚ್ 23ರಂದು ತಮಿಳುನಾಡಿನ ಕೊಯಮತ್ತೂರು ಸಮೀಪದ ಕಲಂಗಲ್‌ನಲ್ಲಿ ಜನಿಸಿದ ಅವರು ಮುಂದೆ ಭಾರತದ ಕೈಗಾರಿಕಾ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅವರನ್ನು ‘ಭಾರತದ ಎಡಿಸನ್’ ಎಂದೂ ಕರೆಯಲಾಗುತ್ತದೆ. ಬಾಲ್ಯದಿಂದಲೇ ಯಂತ್ರಗಳ ಬಗ್ಗೆ ಅವರಿಗೆ ವಿಚಿತ್ರ ಕುತೂಹಲ. ಸುತ್ತಮುತ್ತ ಸಿಗುವ ವಸ್ತುಗಳನ್ನು ಬಿಡಿಸಿ ಒಳಗೇನಿದೆ ಎಂದು ನೋಡುವುದು, ಅದರ ಕೆಲಸವನ್ನು ಅರ್ಥಮಾಡಿಕೊಳ್ಳುವುದು, ಮತ್ತೆ ಜೋಡಿಸುವುದು ಅವರ ಸ್ವಭಾವವಾಗಿತ್ತು.

ಶಾಲಾ ಶಿಕ್ಷಣ ಹೆಚ್ಚು ಮುಂದುವರಿಯದಿದ್ದರೂ ಕಲಿಯುವ ಆಸಕ್ತಿ ಮಾತ್ರ ನಿಲ್ಲಲಿಲ್ಲ. ಪುಸ್ತಕಗಳು, ಯಂತ್ರಗಳು, ಕೆಲಸದ ಅನುಭವ ಮತ್ತು ಪ್ರಯೋಗಗಳೇ ಅವರ ಮುಂದಿನ ಶಿಕ್ಷಣದ ಸಾಧನಗಳಾದವು. ಯಂತ್ರವನ್ನು ನೋಡಿ ಹೆದರಲಿಲ್ಲ. ಅದರೊಳಗೆ ಏನಿದೆ ಎಂದು ತಿಳಿಯಲು ಅದನ್ನು ತೆರೆದರು. ಅಲ್ಲಿಂದ ಅವರ ಸ್ವಯಂ ಕಲಿಕೆಯ ಪಯಣ ಮತ್ತಷ್ಟು ವೇಗ ಪಡೆದುಕೊಂಡಿತು. ಆದರೆ ಅವರ ಕಥೆ ಮೋಟಾರ್‌ಸೈಕಲ್‌ನಲ್ಲೇ ಮುಗಿಯಲಿಲ್ಲ. ಒಂದು ಬಸ್‌ನಿಂದ ಆರಂಭವಾದ ಅವರ ಸಾರಿಗೆ ಉದ್ಯಮ ದೊಡ್ಡ ಪ್ರಮಾಣದ ಬಸ್‌ ಸೇವೆಯಾಗಿ ಬೆಳೆಯಿತು.

ವಾಹನಗಳ ದುರಸ್ತಿ, ಬಿಡಿಭಾಗಗಳು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾ ಅವರು ತಮ್ಮದೇ ಪ್ರಯೋಗಗಳತ್ತ ತಿರುಗಿದರು. ನಂತರ ವಿದ್ಯುತ್, ಯಂತ್ರೋಪಕರಣ, ಆಟೋಮೊಬೈಲ್, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಯೋಗ ನಡೆಸಿದರು. 1937ರಲ್ಲಿ ಅವರು ಭಾರತೀಯವಾಗಿ ಅಭಿವೃದ್ಧಿಪಡಿಸಿದ ಎಲೆಕ್ಟ್ರಿಕ್ ಮೋಟಾರ್ ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಯಿತು.

ಆಗ ಭಾರತ ತಂತ್ರಜ್ಞಾನಕ್ಕಾಗಿ ವಿದೇಶಗಳತ್ತ ಹೆಚ್ಚಿನ ಪ್ರಮಾಣದಲ್ಲಿ ನೋಡುತ್ತಿದ್ದ ಕಾಲ. ಅಂಥ ಸಂದರ್ಭದಲ್ಲಿ ದೇಶದಲ್ಲೇ ತಂತ್ರಜ್ಞಾನ ರೂಪಿಸುವ ಪ್ರಯತ್ನವೇ ದೊಡ್ಡ ಸಂಗತಿಯಾಗಿತ್ತು. ಅಷ್ಟೇ ಅಲ್ಲ, ಎಲೆಕ್ಟ್ರಿಕ್ ರೇಜರ್, ಶೇವಿಂಗ್ ಬ್ಲೇಡ್, ಹಣ್ಣಿನ ರಸ ತೆಗೆಯುವ ಯಂತ್ರ, ಕ್ಯಾಮೆರಾ ಲೆನ್ಸ್ ಅಡ್ಜಸ್ಟರ್ ಸೇರಿದಂತೆ ಹಲವು ಉಪಯುಕ್ತ ವಸ್ತುಗಳು ಮತ್ತು ತಾಂತ್ರಿಕ ಪ್ರಯೋಗಗಳು ಅವರ ಹೆಸರಿನೊಂದಿಗೆ ಸೇರಿಕೊಂಡಿವೆ.

ನಮ್ಮ ಮಗು ಗಣಿತದಲ್ಲಿ ಕಡಿಮೆ ಅಂಕ ಪಡೆದರೆ ತಕ್ಷಣ ಚಿಂತೆ ಮಾಡುತ್ತೇವೆ. ಇಂಗ್ಲಿಷ್‌ನಲ್ಲಿ ಕಡಿಮೆ ಅಂಕ ಬಂದರೆ ಟ್ಯೂಷನ್ ಹುಡುಕುತ್ತೇವೆ. ಪರೀಕ್ಷೆಯಲ್ಲಿ ಮೊದಲ ಸ್ಥಾನ ಬರದಿದ್ದರೆ “ಇನ್ನಷ್ಟು ಓದಬೇಕು” ಎನ್ನುತ್ತೇವೆ. ಶಿಕ್ಷಣ ಮತ್ತು ಅಂಕಗಳು ಮುಖ್ಯವೇ. ಆದರೆ ಅಂಕಗಳೇ ಮಗುವಿನ ಸಂಪೂರ್ಣ ಪ್ರತಿಭೆಯ ತಕ್ಕಡಿಯಲ್ಲ ಎಂಬುದನ್ನು ನಾವು ಅರಿಯುವುದೇ ಇಲ್ಲ! ಯಾರಿಗಾದರೂ ಗಣಿತ ಚೆನ್ನಾಗಿ ಬರಬಹುದು. ಇನ್ನೊಬ್ಬರಿಗೆ ಚಿತ್ರ ಬಿಡಿಸುವ ಸಾಮರ್ಥ್ಯವಿರಬಹುದು. ಮತ್ತೊಬ್ಬರಿಗೆ ಯಂತ್ರಗಳನ್ನು ಬಿಡಿಸಿ ನೋಡುವ ಕುತೂಹಲವಿರಬಹುದು.

ಒಂದು ಮಗು ಪುಸ್ತಕದಲ್ಲಿ 95 ಅಂಕ ಗಳಿಸಬಹುದು. ಇನ್ನೊಂದು ಮಗು ಹಳೆಯ ರೇಡಿಯೋವನ್ನು ಬಿಡಿಸಿ ಅದರೊಳಗೆ ಏನಿದೆ ಎಂದು ಹುಡುಕಬಹುದು. ಎರಡನೆಯ ಮಗುವಿನ ಪ್ರತಿಭೆಯನ್ನು ಮೊದಲನೆಯ ಮಗುವಿನ ಅಂಕಪಟ್ಟಿಯಿಂದ ಅಳೆಯಲು ಸಾಧ್ಯವೇ? “ನಿನಗೆ ಯಾವ ವಿಷಯ ಇಷ್ಟ?” ಎಂದು ಕೇಳುವುದರ ಜೊತೆಗೆ “ನೀನು ಇದನ್ನು ಹೇಗೆ ಮಾಡಿದೆ?” ಎಂದು ಕೂಡ ಕೇಳಿ ನೋಡಿ.

ಮಗು ಆಟಿಕೆ ಕಾರನ್ನು ಬಿಡಿಸಿ ನೋಡುತ್ತಿದ್ದರೆ “ಕೆಡಿಸಬೇಡ” ಎನ್ನುವ ಬದಲು, “ಇದರೊಳಗೆ ಏನಿದೆ ಎಂದು ನೋಡೋಣವೇ?” ಎಂದು ಕೇಳಿ. ಚಿತ್ರ ಬಿಡಿಸುತ್ತಿದ್ದರೆ ಅದನ್ನು ಕೇವಲ ಸಮಯ ಕಳೆಯುವ ಕೆಲಸವೆಂದು ನೋಡಬೇಡಿ. ಯಾವುದಾದರೂ ಯಂತ್ರ, ಕಂಪ್ಯೂಟರ್ ಅಥವಾ ವಸ್ತುವಿನ ಬಗ್ಗೆ ಮಗು ನಿರಂತರವಾಗಿ ಪ್ರಶ್ನಿಸುತ್ತಿದ್ದರೆ ಆ ಕುತೂಹಲವನ್ನು ತಡೆಯುವ ಬದಲು ಅದಕ್ಕೆ ದಾರಿ ತೋರಿಸಿ. ಏಕೆಂದರೆ ಪ್ರತಿಭೆ ಯಾವಾಗಲೂ ಅಂಕಪಟ್ಟಿಯಲ್ಲಿ ಕಾಣಿಸುವುದಿಲ್ಲ!

ಅವರೊಳಗಿನ ಪ್ರಶ್ನೆಗಳನ್ನು ಗಮನಿಸಿ, ಕುತೂಹಲಕ್ಕೆ ಅವಕಾಶ ಕೊಡಿ, ಪ್ರಯೋಗಿಸಲು ಬಿಡಿ, ತಪ್ಪು ಮಾಡಿದಾಗ ಹೆದರಿಸಬೇಡಿ. ಬಹುಶಃ ಇಂದು ಗಣಿತದಲ್ಲಿ ಕಡಿಮೆ ಅಂಕ ಪಡೆದಿರುವ ಮಗು ನಾಳೆ ಅದ್ಭುತ ಕಲಾವಿದನಾಗಬಹುದು. ಪುಸ್ತಕ ಓದುವುದಕ್ಕಿಂತ ಯಂತ್ರಗಳನ್ನು ಬಿಡಿಸಿ ನೋಡುವ ಮಗು ಭವಿಷ್ಯದ ಇಂಜಿನಿಯರ್ ಆಗಬಹುದು. ತರಗತಿಯಲ್ಲಿ ಹೆಚ್ಚು ಮಾತನಾಡದ ಮಗು ಒಬ್ಬ ಅದ್ಭುತ ಸಂಶೋಧಕನಾಗಬಹುದು!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share