ಯಲ್ಲಾಪುರ: ದಿ. ಮಹಾಬಲೇಶ್ವರ ಭಟ್ಟ ನೇರಲಮನೆ ಹಾಗೂ ದಿ. ಚಿದಂಬರ ಭಟ್ಟ ಸೂಳಗಾರ ಇವರ ಸ್ಮರಣಾರ್ಥ ‘ಸಂಸ್ಮರಣೆ’ ಕಾರ್ಯಕ್ರಮವನ್ನು ಏಪ್ರಿಲ್ 4, ಶನಿವಾರದಂದು ಯಲ್ಲಾಪುರ ತಾಲೂಕಿನ ಸೂಳಗಾರ ಶಾಲೆಯಲ್ಲಿ ಆಯೋಜಿಸಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಭಟ್ರಕೇರಿ ಶ್ರೀ ಲಕ್ಷ್ಮೀನೃಸಿಂಹ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು.
ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ವೇ.ಮೂ ನಾರಾಯಣ ಭಟ್ಟ ಭಟ್ರಕೇರಿ, ದಿ. ಮಹಾಬಲೇಶ್ವರ ಭಟ್ಟ ಹಾಗೂ ದಿ. ಚಿದಂಬರ ಭಟ್ಟ ಅವರು ಸಾತ್ವಿಕ ವೈದಿಕರಷ್ಟೇ ಅಲ್ಲದೆ, ಕಲಾವಿದರು, ಸಂಘಟಕರು, ಕಲಾರಾಧಕರೂ ಆಗಿದ್ದರು. ಅವರ ಕಾಲದಲ್ಲಿ ಸೂಳಗಾರ ಶಾಲೆಯಲ್ಲಿ ಪ್ರತಿವರ್ಷ ನಾಟಕ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಿರಂತರವಾಗಿ ಹಲವಾರು ವರ್ಷ ನಡೆದಿವೆ. ಅವರ ‘ಸಂಸ್ಮರಣೆ’ ಕಾರ್ಯಕ್ರಮ ಸಂಘಟಿಸಿರುವುದು ಔಚಿತ್ಯಪೂರ್ಣ, ಅಭಿನಂದನೀಯವಾಗಿದೆ. ನಾವೆಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಕಾರ್ಯಕ್ರಮದ ವಿವರ ನೀಡಿದ ಅಣಲಗಾರ ʻಸಿರಿ ಕಲಾ ಬಳಗʼದ ಅಧ್ಯಕ್ಷರಾದ ರವೀಂದ್ರ ಭಟ್ಟ ವೈದಿಕರಮನೆ, ಎಪ್ರಿಲ್ 4ರಂದು ಮಧ್ಯಾಹ್ನ 2.50ಕ್ಕೆ ವೇ.ಮೂ. ವೆಂಕಟ್ರಮಣ ಭಟ್ಟ ಗುರ್ತೆಗದ್ದೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ ಮಕ್ಕಳಿಂದ ಚಕ್ರವ್ಯೂಹ ತಾಳಮದ್ದಳೆ, 4ರಿಂದ 5ರವರೆಗೆ ವೈದಿಕ ಉಪನ್ಯಾಸ, 5ರಿಂದ 5.45ರವರೆಗೆ ಗಣೇಶ ಹೆಗಡೆ ನೆರ್ಲೇಮನೆ ಇವರಿಂದ ಸಂಗೀತ ಕಾರ್ಯಕ್ರಮ, 5.45ರಿಂದ 6.15ರವರೆಗೆ ಅರ್ಪಿತಾ ವಿ.ಭಟ್ಟ ಅಂಕೋಲಾ ಇವಳಿಂದ ಯಕ್ಷನೃತ್ಯ, 6.15ರಿಂದ 7ರವರೆಗೆ ವಿದೂಷಿ ಸುಮಾ ಹೆಗಡೆ ತೊಂಡೆಕೆರೆ ಇವರಿಂದ ಭರತನಾಟ್ಯ, ರಾತ್ರಿ 8ರಿಂದ ಸಭಾ ಕಾರ್ಯಕ್ರಮ, 9.30ರಿಂದ ಪೌರಾಣಿಕ ನಾಟಕ ‘ರಕ್ತರಾತ್ರಿ’ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ವೇ.ಮೂ. ವೆಂಕಟ್ರಮಣ ಭಟ್ಟ ಭಟ್ರಕೇರಿ, ನಾರಾಯಣ ಭಟ್ಟ ತೆಂಗಿನಜಡ್ಡಿ, ಮಾದೇವ ನಾಯ್ಕ ಸೇರಿದಂತೆ ಸಂಸ್ಮರಣಾ ಕಾರ್ಯಕ್ರಮ ಬಳಗದ ಸದಸ್ಯರು ಉಪಸ್ಥಿತರಿದ್ದರು.