Monday, September 7, 2026
Join WhatsApp Group
HomeLocal Newsಮಾದಕ ವ್ಯಸನ ಮುಕ್ತ ಶಿಬಿರ ಆಯೋಜನೆಗೆ ಡಿಸಿ ಸೂಚನೆ

ಮಾದಕ ವ್ಯಸನ ಮುಕ್ತ ಶಿಬಿರ ಆಯೋಜನೆಗೆ ಡಿಸಿ ಸೂಚನೆ

ಜುಲೈ ತಿಂಗಳೊಂದರಲ್ಲಿಯೇ 1.77 ಲಕ್ಷ ರೂ ಮೌಲ್ಯದ 5.555 ಕೆ.ಜಿ. ಗಾಂಜಾ ವಶಕ್ಕೆ!

ಕಾರವಾರ: ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದವರು ಅದರಿಂದ ಹೊರಬರಲು ನೆರವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವ್ಯಸನ ಮುಕ್ತ ಶಿಬಿರಗಳನ್ನು ಆಯೋಜಿಸಿ, ಚಿಕಿತ್ಸೆ ಹಾಗೂ ಅರಿವು ಕಾರ್ಯಕ್ರಮಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್‌ಕಾರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಮಾದಕ ವಸ್ತುಗಳ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾದವರು ಮತ್ತೆ ವ್ಯಸನಕ್ಕೆ ಒಳಗಾಗದಂತೆ ವಿಶೇಷ ಅರಿವು ಮೂಡಿಸಬೇಕು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ವ್ಯಸನಮುಕ್ತ ಶಿಬಿರಗಳನ್ನು ನಡೆಸಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹಾಗೂ ಹೋಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ನಿಯಮಿತ ತಪಾಸಣೆ ನಡೆಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸರಬರಾಜು, ಮಾರಾಟ ಹಾಗೂ ಬಳಕೆಯ ವಿರುದ್ಧ ನಿರಂತರ ತಪಾಸಣೆ ನಡೆಸಲಾಗುತ್ತಿದೆ. ಪ್ರವಾಸಿಗರ ಮೂಲಕ ಮಾದಕ ವಸ್ತುಗಳ ಬಳಕೆಯಾಗದಂತೆ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ‘ಬೇಡ ಬ್ರೋ’ ಮತ್ತು ‘ರೈಸ್’ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಆಂಟಿ ಡ್ರಗ್ ಕಮಿಟಿಗಳನ್ನು ರಚಿಸಲಾಗಿದೆ ಎಂದರು.

ಜುಲೈ ತಿಂಗಳಲ್ಲಿ 5 ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣಗಳಲ್ಲಿ 11 ಮಂದಿಯನ್ನು ಬಂಧಿಸಿ, ₹1.77 ಲಕ್ಷ ಮೌಲ್ಯದ 5.555 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದ 65 ಪ್ರಕರಣಗಳಲ್ಲಿ 70 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ಪೊಲೀಸ್, ಅಬಕಾರಿ, ಅರಣ್ಯ, ಮೀನುಗಾರಿಕೆ, ಬಂದರು, ಅಂಚೆ, ಕೋಸ್ಟ್‌ಗಾರ್ಡ್, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಅಬಕಾರಿ ಇಲಾಖೆಯ ಡಿಸಿ ಅಮಾನುಲ್ಲಾಖಾನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share