Monday, September 7, 2026
Join WhatsApp Group
HomeAgricultureಗುಟ್ಖಾ ನಿಷೇಧ ಮತ್ತು ಅಡಿಕೆಯ ಸುತ್ತಮುತ್ತ... (ಅಧ್ಯಾಯ-1)

ಗುಟ್ಖಾ ನಿಷೇಧ ಮತ್ತು ಅಡಿಕೆಯ ಸುತ್ತಮುತ್ತ… (ಅಧ್ಯಾಯ-1)

ಬಾಲಕೃಷ್ಣ ಹೆಗಡೆ, ಶಿರಸಿ

ಗುಟ್ಖಾ ನಿಷೇಧದ ಸುದ್ದಿ ಬಂದಾಗಲೆಲ್ಲ ಅಡಿಕೆ ರೈತರಲ್ಲಿ ಒಂದು ಸಾಮಾನ್ಯ ಆಕ್ರೋಶ ಕೇಳಿಬರುತ್ತದೆ. “ಸಾರಾಯಿ, ಸಿಗರೇಟ್‌ಗಳು ಗುಟ್ಖಾಕ್ಕಿಂತ ಹೆಚ್ಚು ಹಾನಿಕಾರಕ. ಅವುಗಳನ್ನು ಮೊದಲು ಬ್ಯಾನ್‌ ಮಾಡಿ…” ಎಂಬ ಮಾತು. ಕೇಳುವುದಕ್ಕೆ ಇದು ಸಹಜವಾದ ಪ್ರಶ್ನೆಯೇ. ಆದರೆ ಸರ್ಕಾರಗಳು ಇಂತಹ ಪ್ರಶ್ನೆಗಳಿಗೆ ಹೆಚ್ಚು ಬೆಲೆ ಕೊಡುವುದಿಲ್ಲ. ಕಾರಣ ಸರಳ. ಸುಧಾರಣೆ ಎಲ್ಲಿಂದಾದರೂ ಶುರುವಾಗಬೇಕು. ಒಂದನ್ನು ನಿಷೇಧಿಸಲು ಹೊರಟರೆ, ಇನ್ನೊಂದನ್ನು ಬೆರಳು ತೋರಿಸಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ “ಎಲ್ಲವೂ ಒಂದೇ ದಿನ ಬದಲಾಗಬೇಕು” ಎನ್ನುವುದಕ್ಕಿಂತ “ಎಲ್ಲಾದರೂ ಒಂದು ಕಡೆಯಿಂದ ಶುರುವಾಗಲಿ” ಎಂಬ ನಿಲುವು ಸರ್ಕಾರಗಳದ್ದು.

ಇಲ್ಲಿ ಸಾಮಾನ್ಯವಾಗಿ ನಾವು ಗಮನಿಸದ ಒಂದು ಕಾನೂನಿನ ಸೂಕ್ಷ್ಮತೆ ಇದೆ. ಸಿಗರೇಟ್ ಮತ್ತು ಮದ್ಯವನ್ನು ಕಾನೂನು ಬಹಳ ಹಿಂದಿನಿಂದಲೇ ಚಟಕ್ಕೆ ಸಂಬಂಧಿಸಿದ ವಸ್ತುಗಳು ಎಂದು ಗುರುತಿಸಿದೆ. ಅವುಗಳ ಉತ್ಪಾದನೆಯಿಂದ ಹಿಡಿದು ಮಾರಾಟ, ಬಳಕೆ, ಜಾಹೀರಾತು, ವಯೋಮಿತಿ, ಸಾರ್ವಜನಿಕ ಸ್ಥಳಗಳಲ್ಲಿ ಬಳಕೆ, ತೆರಿಗೆ ಹೀಗೆ ಹಲವು ಹಂತಗಳಲ್ಲಿ ನಿಯಂತ್ರಣವಿದೆ. ಆದರೆ ಅಡಿಕೆ, ಗುಟ್ಖಾ, ಖೈನಿ, ಖರ್ರಾ, ಪಾನ್, ಪಾನ್‌ ಮಸಾಲಾ, ಮಾವಾ/ಮಾಮಾ, ಜರ್ದಾ ಇವೆಲ್ಲ ಒಂದೇ ಕಾನೂನು ಬುಟ್ಟಿಯಲ್ಲಿ ಬರುವುದಿಲ್ಲ. ಅದರಲ್ಲೂ ಅಡಿಕೆಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಿನ್ನೆಲೆಯೂ ಇದೆ. ಅಡಿಕೆ ಪೂಜನೀಯ, ತಾಂಬೂಲ ಪುಣ್ಯವಸ್ತು, ಬರೇ ಅಡಿಕೆ ತಿಂದರೆ ಕ್ಯಾನ್ಸರ್ ಬರುವುದಿಲ್ಲ ಎಂಬ ವಾದಗಳೂ ಇವೆ.

ಆದರೆ ಇಲ್ಲೊಂದು ಪ್ರಶ್ನೆ ಎದುರಾಗುತ್ತದೆ. ಒಂದು ವಸ್ತು ಪೂಜೆಯಲ್ಲೂ ಬಳಕೆಯಾಗುತ್ತದೆ ಎಂಬ ಕಾರಣಕ್ಕೆ, ಅದೇ ವಸ್ತುವಿನ ಅಪಾಯಕಾರಿ ಉಪಯೋಗಗಳಿಗೂ ಕಾನೂನು ರಕ್ಷಣೆ ಸಿಗಬೇಕೇ?

ಕಾನೂನನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಚಟ ಮತ್ತು ಆಹಾರ ಎಂಬ ಎರಡು ವಿಭಾಗಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಚಟ ಮಾಡಬೇಡಿ ಎಂಬ ಸಲಹೆಯ ಜೊತೆಗೆ ವ್ಯಕ್ತಿಯ ವೈಯಕ್ತಿಕ ಆಯ್ಕೆಗೆ ಒಂದು ಮಟ್ಟದ ಸ್ವಾತಂತ್ರ್ಯವಿರುತ್ತದೆ. ಆದರೆ ಒಂದು ಆಹಾರವಸ್ತುವಿನ ಬಳಕೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವಿದೆ ಎಂಬುದು ಸಾಬೀತಾದರೆ, ಅದರ ಉತ್ಪಾದನೆ, ಮಾರಾಟ ಅಥವಾ ಬಳಕೆಯ ಮೇಲೆ ಸರ್ಕಾರ ನಿರ್ಬಂಧ ಹೇರುವ ಅವಕಾಶವಿದೆ. ಅಂದರೆ “ಇದು ಆಹಾರ” ಎಂಬ ಒಂದೇ ಕಾರಣದಿಂದ ಅದು ಕಾನೂನಿನ ಆಚೆಗೆ ಹೋಗುವುದಿಲ್ಲ.

ಇನ್ನು ಅಡಿಕೆಯ ವಿಚಾರಕ್ಕೆ ಬಂದರೆ ವಿಷಯ ಇನ್ನಷ್ಟು ಕುತೂಹಲಕರ. ಇಂದು ಅಡಿಕೆಗೆ ಸಿಗುತ್ತಿರುವ ದೊಡ್ಡ ಮಟ್ಟದ ಬೇಡಿಕೆ ಮತ್ತು ಬೆಲೆಯ ಹಿಂದೆ ಕೇವಲ ಪೂಜೆಗಾಗಿ ಬಳಸುವ ಅಡಿಕೆಯೇ ಕಾರಣವಲ್ಲ. ತಂಬಾಕಿನೊಂದಿಗೆ ಸೇರುವ ಗುಟ್ಖಾ, ಮಾವಾ, ಖರ್ರಾ, ಪಾನ್‌ ಸೇರಿದಂತೆ ಹಲವು ಉತ್ಪನ್ನಗಳಲ್ಲಿ ಅಡಿಕೆ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಬರೇ ಅಡಿಕೆಯನ್ನು ತಿನ್ನುವವರಿಲ್ಲ ಎಂದಲ್ಲ. ಆದರೆ ಅವರ ಪ್ರಮಾಣ ಕಡಿಮೆ. ನಾಳೆ ಏಕಾಏಕಿ ಎಲ್ಲರೂ ತಂಬಾಕು ಇಲ್ಲದೆ ಅಡಿಕೆಯನ್ನು ಅಡಿಕೆಯಾಗಿಯೇ ತಿನ್ನಲು ಶುರು ಮಾಡಿದರೆ, ಇಂದಿನ ಅಡಿಕೆ ದರ ಇದೇ ಮಟ್ಟದಲ್ಲಿ ಉಳಿಯುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.

ಪೂಜಾ ವಸ್ತುವಾಗಿ ಅಡಿಕೆಗೆ ಇರುವ ಸ್ಥಾನಮಾನ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ಆದರೆ ಅಡಿಕೆಯ ಬಹುಪಾಲು ಬಳಕೆ ಚಟಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೂಲಕವೇ ನಡೆಯುತ್ತಿದ್ದರೆ, “ಅಡಿಕೆ ಪೂಜೆಯ ವಸ್ತು, ಹಾಗಾಗಿ ಅದಕ್ಕೆ ಚಟದ ಸಂಬಂಧವೇ ಇಲ್ಲ” ಎನ್ನುವುದು ಎಷ್ಟು ತಾರ್ಕಿಕ?

ಇಲ್ಲಿಂದಲೇ ಅಡಿಕೆಯ ಕಾನೂನು ಸ್ಥಾನಮಾನದ ಪ್ರಶ್ನೆ ಶುರುವಾಗುತ್ತದೆ.

ಮದ್ಯದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಭಾರತದಲ್ಲಿ ಮದ್ಯದ ಉತ್ಪಾದನೆ, ಸಂಗ್ರಹ, ಸಾಗಾಟ, ಖರೀದಿ ಮತ್ತು ಮಾರಾಟವನ್ನು ನಿಯಂತ್ರಿಸುವ ಪ್ರಮುಖ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ. ಸಂವಿಧಾನದ ಏಳನೇ ಅನುಸೂಚಿಯ ರಾಜ್ಯಪಟ್ಟಿಯ ಪ್ರವೇಶ 8ರ ಅಡಿಯಲ್ಲಿ ಈ ಅಧಿಕಾರ ರಾಜ್ಯಗಳಿಗೆ ನೀಡಲಾಗಿದೆ. ಹೀಗಾಗಿ ಯಾವ ವಯಸ್ಸಿನಲ್ಲಿ ಮದ್ಯ ಖರೀದಿಸಬಹುದು, ಯಾವ ಸಮಯದಲ್ಲಿ ಮಾರಾಟ ಮಾಡಬಹುದು, ಯಾವ ರೀತಿಯ ಮದ್ಯಕ್ಕೆ ಎಷ್ಟು ತೆರಿಗೆ, ಯಾರಿಗೆ ಪರವಾನಗಿ ನೀಡಬೇಕು, ಯಾವ ದಿನಗಳನ್ನು ‘ಡ್ರೈ ಡೇ’ ಎಂದು ಘೋಷಿಸಬೇಕು ಎಂಬ ಹಲವು ವಿಚಾರಗಳನ್ನು ರಾಜ್ಯಗಳು ನಿರ್ಧರಿಸುತ್ತವೆ.

ಇದಕ್ಕಾಗಿಯೇ ದೇಶದ ಎಲ್ಲ ರಾಜ್ಯಗಳಲ್ಲೂ ಮದ್ಯದ ಕಾನೂನು ಒಂದೇ ರೀತಿಯಲ್ಲಿಲ್ಲ. ಗುಜರಾತ್‌, ಬಿಹಾರ, ನಾಗಾಲ್ಯಾಂಡ್‌, ಮಿಜೋರಾಂ ಮುಂತಾದ ರಾಜ್ಯಗಳು ವಿವಿಧ ಹಂತಗಳಲ್ಲಿ ಮದ್ಯನಿಷೇಧ ಜಾರಿಗೊಳಿಸಿವೆ. ಕೆಲವು ಕಡೆ ಪ್ರವಾಸಿ ಪ್ರದೇಶಗಳು ಅಥವಾ ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಮಾರಾಟಕ್ಕೆ ಅವಕಾಶವಿದೆ. ಇನ್ನೂ ಕೆಲವು ರಾಜ್ಯಗಳು ನಿಷೇಧ ಜಾರಿಗೊಳಿಸಿ ನಂತರ ಕಳ್ಳಸಾಗಣೆ, ಅಕ್ರಮ ಮಾರಾಟ ಮತ್ತು ಇತರ ಸಮಸ್ಯೆಗಳಿಂದಾಗಿ ನೀತಿಯನ್ನು ಬದಲಾಯಿಸಿವೆ.

ಒಂದು ಮುಖ್ಯ ವಿಷಯ. ಕಾನೂನಿನಲ್ಲಿ ನಿಷೇಧ ಹೇರಿದರೆ ಮಾತ್ರ ಸಮಾಜದಿಂದ ಆ ವಸ್ತು ಮಾಯವಾಗುವುದಿಲ್ಲ. ನಿಷೇಧದ ಜೊತೆಗೆ ಅದರ ಜಾರಿ ಸಾಮರ್ಥ್ಯ, ಕಳ್ಳಸಾಗಣೆ, ಅಕ್ರಮ ಮಾರುಕಟ್ಟೆ, ಜನರ ಬಳಕೆಯ ಮನಸ್ಥಿತಿ ಇವೆಲ್ಲವೂ ಮುಖ್ಯವಾಗುತ್ತವೆ.

ಕೇಂದ್ರ ಸರ್ಕಾರದ ಪಾತ್ರವೂ ಇಲ್ಲೇ ಬರುತ್ತದೆ. ರಾಜ್ಯಗಳ ನಡುವಿನ ವ್ಯಾಪಾರ, ಉದ್ಯಮಕ್ಕೆ ಸಂಬಂಧಿಸಿದ ಒಟ್ಟಾರೆ ನಿಯಮಗಳು, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ನಿಯಂತ್ರಣಗಳು, ಕುಡಿದು ವಾಹನ ಚಲಾಯಿಸುವುದಕ್ಕೆ ಸಂಬಂಧಿಸಿದ ಮೋಟಾರು ವಾಹನ ಕಾಯ್ದೆಯ ನಿಯಮಗಳು, ತಂಬಾಕು ಮತ್ತು ಮದ್ಯದ ಜಾಹೀರಾತುಗಳ ಮೇಲಿನ ನಿರ್ಬಂಧಗಳು ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರದ ಕಾನೂನುಗಳು ಅನ್ವಯಿಸುತ್ತವೆ.

ಹಾಗಾದರೆ ಅಡಿಕೆ ಕಾನೂನಿನ ದೃಷ್ಟಿಯಲ್ಲಿ ನಿಖರವಾಗಿ ಎಲ್ಲಿದೆ? ಅದನ್ನು ಆಹಾರವೆಂದು ನೋಡಬೇಕೇ, ಚಟಕ್ಕೆ ಸಂಬಂಧಿಸಿದ ವಸ್ತುವೆಂದು ನೋಡಬೇಕೇ? ಗುಟ್ಖಾ ನಿಷೇಧವಾದರೆ ಅಡಿಕೆ ರೈತರ ಮೇಲೆ ಅದರ ಪರಿಣಾಮ ಎಷ್ಟು? ಅಡಿಕೆಯನ್ನು ತಂಬಾಕು ಉತ್ಪನ್ನಗಳಿಂದ ಸಂಪೂರ್ಣವಾಗಿ ಬೇರ್ಪಡಿಸಿದರೆ ಮಾರುಕಟ್ಟೆಯ ಮೇಲೆ ಏನಾಗಬಹುದು?

ಇದೇ ಈ ಚರ್ಚೆಯ ನಿಜವಾದ ಕುತೂಹಲ. ಗುಟ್ಖಾ ನಿಷೇಧದ ಪ್ರಶ್ನೆ ಕೇವಲ ಗುಟ್ಖಾದ ಪ್ರಶ್ನೆಯಲ್ಲ. ಅದರ ಹಿಂದೆ ಅಡಿಕೆ ರೈತ, ಅಡಿಕೆ ಮಾರುಕಟ್ಟೆ, ಸಾರ್ವಜನಿಕ ಆರೋಗ್ಯ ಮತ್ತು ಕಾನೂನು ಈ ನಾಲ್ಕೂ ಒಂದಕ್ಕೊಂದು ಜೋಡಿಸಿಕೊಂಡಿವೆ.

ಮುಂದಿನ ಭಾಗದಲ್ಲಿ ಅಡಿಕೆ ನಿಜವಾಗಿಯೂ “ಚಟದ ವಸ್ತು” ಎಂದು ಕಾನೂನಿನಲ್ಲಿ ಪರಿಗಣಿಸಲ್ಪಟ್ಟರೆ ಏನಾಗಬಹುದು? ಗುಟ್ಖಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಹೇಗೆ ಬೀಳಬಹುದು ಎಂಬುದನ್ನು ನೋಡೋಣ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share