Monday, September 7, 2026
Join WhatsApp Group
HomeLocal Newsವ್ಯಸನಮುಕ್ತ ಸಮಾಜಕ್ಕೆ ಯುವಕರೇ ಶಕ್ತಿ: ರಾಜಶೇಖರ ವಂದಲಿ

ವ್ಯಸನಮುಕ್ತ ಸಮಾಜಕ್ಕೆ ಯುವಕರೇ ಶಕ್ತಿ: ರಾಜಶೇಖರ ವಂದಲಿ

ಯಲ್ಲಾಪುರ: ಮಾದಕ ದ್ರವ್ಯಗಳ ಸೇವನೆ ವ್ಯಕ್ತಿಯ ಮನಸ್ಸು, ಆರೋಗ್ಯ ಹಾಗೂ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಯುವ ಸಮುದಾಯವು ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಬದುಕಿನತ್ತ ಗಮನಹರಿಸುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ರಾಜಶೇಖರ ವಂದಲಿ ಹೇಳಿದರು.

ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಜನೋನ್ನತಿ ಟ್ರಸ್ಟ್‌ನ ಪ್ರಥಮ ಕಾರ್ಯಕ್ರಮವಾಗಿ ಆಯೋಜಿಸಿದ್ದ ಮಾದಕ ವ್ಯಸನ ಮುಕ್ತ ಜಾಗೃತಿ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹರೆಯದ ವಯಸ್ಸಿನಲ್ಲಿ ಮಕ್ಕಳು ಹಾಗೂ ಯುವಕರು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ಹಳ್ಳಿಯ ಮಕ್ಕಳು ಮುಗ್ಧರಾಗಿದ್ದು, ಮಾದಕ ವಸ್ತುಗಳಂತಹ ದುಶ್ಚಟಗಳಿಂದ ತಮ್ಮನ್ನು ತಾವು ದೂರವಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ವನರಾಗ ಶರ್ಮಾ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಸಮಾಜದಲ್ಲಿ ಜಾಗೃತಿ ಮೂಡಿದಾಗ ಸುಖ, ಶಾಂತಿ ನೆಲೆಸಲು ಸಾಧ್ಯ. ಯುವಕರು ಸದಾ ಸಕಾರಾತ್ಮಕ ವಿಚಾರಗಳತ್ತ ತಮ್ಮ ಚಿಂತನೆ ಹರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ ಹಾಗೂ ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ ಮಾತನಾಡಿದರು.

ಇದೇ ಸಂದರ್ಭದಲ್ಲಿ ಜನೋನ್ನತಿ ಟ್ರಸ್ಟ್ ವತಿಯಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಸಮಾಜದ ಕುರಿತು ಚಿತ್ರಕಲೆ, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜನೋನ್ನತಿ ಟ್ರಸ್ಟ್ ಖಜಾಂಚಿ ಸುಜನ್ ಮಳಿಕ್ ಸ್ವಾಗತಿಸಿದರು. ಟ್ರಸ್ಟ್‌ನ ಸಂಚಾಲಕ ಸಂಜಯ ಸಿದ್ದಿ ಪ್ರಾಸ್ತಾವಿಕವಾಗಿ ಮಾತನಾಡಿ ಸಾಮಾಜಿಕ ಅಭಿಯಾನದ ರೂಪುರೇಷೆಗಳನ್ನು ವಿವರಿಸಿದರು. ಕಾರ್ಯದರ್ಶಿ ದರ್ಶನ್ ಮರಾಠಿ ನಿರೂಪಿಸಿದರು. ವಿನಯ್ ಗೌಡ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share