ಕಾರವಾರ: ಕಾರವಾರ ಅಂಚೆ ವಿಭಾಗದಲ್ಲಿ ಖಾಲಿ ಇರುವ ಗ್ರಾಮೀಣ ಅಂಚೆ ಸೇವಕರ 43 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಾಖಾ ಅಂಚೆ ಪಾಲಕ (BPM), ಸಹಾಯಕ ಶಾಖಾ ಅಂಚೆ ಪಾಲಕ (ABPM) ಹಾಗೂ ಡಾಕ್ ಸೇವಕ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18ರಿಂದ 40 ವರ್ಷದೊಳಗಿನವರಾಗಿರಬೇಕು ಹಾಗೂ 10ನೇ ತರಗತಿ ತೇರ್ಗಡೆಯಾಗಿರಬೇಕು. ಅಲ್ಲದೆ, 10ನೇ ತರಗತಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರುವುದು ಕಡ್ಡಾಯವಾಗಿದೆ.
ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಎಸ್ಎಸ್ಎಲ್ಸಿ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ನೇಮಕಾತಿ ನಡೆಸಲಾಗುತ್ತದೆ. ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅಂಚೆ ಇಲಾಖೆ ತಿಳಿಸಿದೆ.
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಅಂಕಪಟ್ಟಿ, ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿಕೊಂಡು, ನಿಗದಿತ ನಮೂನೆಯಲ್ಲಿ ಆನ್ಲೈನ್ ಮೂಲಕ ಅಪ್ಲೋಡ್ ಮಾಡಬೇಕು. ಬೇರೆ ಯಾವುದೇ ವಿಧಾನದ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಆನ್ಲೈನ್ ನೋಂದಣಿ ಆಗಸ್ಟ್ 31ರಿಂದ ಸೆಪ್ಟೆಂಬರ್ 19ರವರೆಗೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 21 ಅಗಿದೆ.ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳು https://indiapost.gov.in/gdsonlineengagement ಇಲ್ಲಿ ಲಭ್ಯವಿದೆ.
ದೇಶದಾದ್ಯಂತ ಖಾಲಿ ಇರುವ ಗ್ರಾಮೀಣ ಅಂಚೆ ಸೇವಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಏಕಕಾಲದಲ್ಲಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.