ಇದು ಪ್ರವಾಸೋದ್ಯಮವಲ್ಲ, ಪ್ರಯಾಸೋದ್ಯಮ!
ಯಲ್ಲಾಪುರ: ಒಂದೆಡೆ ಸರ್ಕಾರಗಳು ಗ್ರಾಮೀಣ ಭಾಗದ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗದೆ, ತಾವಿರುವಲ್ಲಿಯೇ ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಬೇಕು ಎಂದು ಹೇಳುತ್ತವೆ. ಮತ್ತೊಂದೆಡೆ, ಅಂತಹ ಸ್ಥಳೀಯ ಉದ್ಯಮಗಳು ಬೆಳೆಯಲು ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವ ವಿಚಾರ ಬಂದಾಗ ಮಾತ್ರ ವೇಗ ಕಡಿಮೆಯಾಗುತ್ತದೆ.
ಉತ್ತರ ಕನ್ನಡದ ಪ್ರವಾಸೋದ್ಯಮದ ಸ್ಥಿತಿಯೂ ಈಗ ಇದೇ ವ್ಯಂಗ್ಯಕ್ಕೆ ಸಾಕ್ಷಿಯಾಗಿದೆ. ಉತ್ತರ ಕನ್ನಡ ಪ್ರವಾಸಿ ತಾಣಗಳ ತವರೂರು. ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಒಂದಲ್ಲ ಒಂದು ಪ್ರವಾಸಿಗರನ್ನು ಸೆಳೆಯುವ ತಾಣವಿದೆ. ಅದರಲ್ಲೂ ಜಲಪಾತಗಳ ಜಿಲ್ಲೆ ಎಂಬ ಹೆಗ್ಗಳಿಕೆಯೇ ಇದೆ. ಯಲ್ಲಾಪುರ ತಾಲೂಕನ್ನೇ ತೆಗೆದುಕೊಳ್ಳಿ. ಇಲ್ಲಿ ಜಲಪಾತಗಳಿಗೇನೂ ಕೊರತೆಯಿಲ್ಲ. ಕೊರತೆಯಿರುವುದು ಅವುಗಳನ್ನು ತಲುಪುವ ಯೋಗ್ಯ ರಸ್ತೆಗಳಿಗಷ್ಟೇ!
ಮಳೆಗಾಲ ಬಂದರೆ ಯಲ್ಲಾಪುರದ ಜಲಪಾತಗಳು ಮೈದುಂಬಿಕೊಳ್ಳುತ್ತವೆ. ಪ್ರಕೃತಿಯ ಸೌಂದರ್ಯ ನೋಡಲು ಪ್ರವಾಸಿಗರೂ ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಪ್ರವಾಸಿಗರಿಗೆ ಪ್ರಕೃತಿ ನೀಡುವ ಅನುಭವವನ್ನು ರಸ್ತೆ ವ್ಯವಸ್ಥೆ ಮಾತ್ರ ಅರ್ಧದಲ್ಲೇ ಹಾಳು ಮಾಡುತ್ತದೆ. ಜಲಪಾತದ ಸೌಂದರ್ಯ ನೋಡಲು ಬಂದವರು ಮೊದಲು ರಸ್ತೆಯ ಹೊಂಡಗಳನ್ನು ದಾಟುವ ಸಾಹಸ ಮಾಡಬೇಕಾದ ಸ್ಥಿತಿ.
ಯಲ್ಲಾಪುರದ ಯಾವ ಜಲಪಾತಕ್ಕೆ ಹೋಗುವ ರಸ್ತೆ ಚೆನ್ನಾಗಿದೆ ಎಂದು ಹುಡುಕಿದರೆ, ಕೊನೆಗೆ ಹೊಂಡಗಳ ನಡುವೆ ರಸ್ತೆಯ ತುಣುಕುಗಳನ್ನೇ ಹುಡುಕಬೇಕಾಗುತ್ತದೆ. ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಪ್ರಕೃತಿಯ ಸೌಂದರ್ಯವನ್ನು ಮೆಚ್ಚಿಕೊಂಡು ಹೋಗುವುದಕ್ಕಿಂತ, ರಸ್ತೆಯ ಅವ್ಯವಸ್ಥೆಯನ್ನು ಬಾಯ್ತುಂಬಾ ಬೈದುಕೊಂಡೇ ಮರಳುವಂತಾಗಿದೆ.
ಪ್ರಸಿದ್ಧ ಮಾಗೋಡು ಜಲಪಾತದ ಪರಿಸ್ಥಿತಿಯಂತೂ ಇನ್ನೂ ಕಷ್ಟ. ಮಾಗೋಡು ಕ್ರಾಸ್ನಿಂದ ನಂದೊಳ್ಳಿವರೆಗೆ, ಮೊಟ್ಟೆಗದ್ದೆ ಮೂಲಕ ಜಲಪಾತದವರೆಗೆ ಸಾಗುವ ಮಾರ್ಗದಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಾಗಬೇಕಾದ ಸ್ಥಿತಿ. ರಸ್ತೆಗಿಂತ ಹೊಂಡಗಳೇ ಹೆಚ್ಚಾಗಿರುವ ಕಡೆ ಒಂದು ಅಡಿ ಆಚೆ ವಾಹನ ಹೋದರೂ ಮಣ್ಣಿನಲ್ಲಿ ಸಿಲುಕುವ ಆತಂಕ. ಜಲಪಾತ ನೋಡಲು ಬಂದ ವಾಹನವೇ ವಾಪಸ್ ಹೋಗುವಾಗ ಗ್ಯಾರೇಜ್ ಹುಡುಕುವ ಸ್ಥಿತಿ ಬಂದರೆ ಅದನ್ನು ಪ್ರವಾಸೋದ್ಯಮ ಎನ್ನಬೇಕೋ, ಪ್ರಯಾಸೋದ್ಯಮ ಎನ್ನಬೇಕೋ?
ಸ್ಥಳೀಯರ ಸಮಸ್ಯೆಯೂ ಇದಕ್ಕಿಂತ ಭಿನ್ನವಲ್ಲ. ಹತ್ತು ಕಿಲೋಮೀಟರ್ ದೂರದಲ್ಲಿರುವ ಯಲ್ಲಾಪುರ ಪಟ್ಟಣ ತಲುಪಲು ಅರ್ಧ ಗಂಟೆ ಬೇಕಾಗುತ್ತದೆ. ತುರ್ತು ಕೆಲಸವಿದೆ ಎಂದು ವಾಹನದ ವೇಗ ಹೆಚ್ಚಿಸಿದರೆ ರಸ್ತೆಯ ಹೊಂಡಗಳೇ ದೊಡ್ಡ ಅಪಾಯವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸಿಗರಿಗೆ ಅನುಕೂಲಕರ ಪ್ರವಾಸೋದ್ಯಮವನ್ನು ರೂಪಿಸುವ ಕನಸು ಕಾಣುವುದಾದರೂ ಹೇಗೆ?
ಪ್ರವಾಸೋದ್ಯಮ ಎಂದರೆ ಕೇವಲ ಜಲಪಾತಗಳ ಹೆಸರು ಹೇಳುವುದು, ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸುವುದು ಅಥವಾ ಪ್ರಚಾರ ಮಾಡುವುದಲ್ಲ. ಪ್ರವಾಸಿಗರು ತಲುಪಲು ಉತ್ತಮ ರಸ್ತೆ, ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ಸುರಕ್ಷತೆ, ಮಾಹಿತಿ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳೂ ಬೇಕು. ಇಲ್ಲವಾದರೆ ಪ್ರಕೃತಿ ಎಷ್ಟೇ ಅದ್ಭುತವಾಗಿದ್ದರೂ, ಪ್ರವಾಸಿಗರ ಅನುಭವ ಮಾತ್ರ ಕಹಿಯಾಗುತ್ತದೆ.
ಇಲ್ಲಿ ಮತ್ತೊಂದು ಪ್ರಶ್ನೆಯೂ ಎದುರಾಗುತ್ತದೆ. ರಸ್ತೆ ಹಾಳಾಗಿದೆ ಎಂಬ ಕಾರಣಕ್ಕೆ ಅಭಿವೃದ್ಧಿ ನಿಲ್ಲಬೇಕೇ? ಅಥವಾ ಅಭಿವೃದ್ಧಿ ಮಾಡಬೇಕೆಂದರೆ ಮತದಾನದ ಲೆಕ್ಕಾಚಾರ ನೋಡಬೇಕೇ? ಒಂದು ಪ್ರದೇಶದ ಜನರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಆಧರಿಸಿ ಅಭಿವೃದ್ಧಿಯ ಮಾನದಂಡ ಬದಲಾಗುವುದಾದರೆ, ಅದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ವಿರುದ್ಧ. ಜನಪ್ರತಿನಿಧಿಯ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬ ನಾಗರಿಕನೂ ಸಮಾನ. ಮತ ಯಾರಿಗೆ ಹಾಕಿದ್ದಾರೆ ಎಂಬುದಕ್ಕಿಂತ, ಅವರು ಆ ಕ್ಷೇತ್ರದ ಜನರು ಎಂಬುದೇ ಮುಖ್ಯ.
ಪ್ರವಾಸೋದ್ಯಮದ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ, ಸಣ್ಣ ಉದ್ಯಮಿಗಳಿಗೆ ಅವಕಾಶ ಹಾಗೂ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ನೀಡಬಹುದು. ಆದರೆ ಅದಕ್ಕೆ ಮೊದಲು ಪ್ರವಾಸಿಗರು ಬರುವ ದಾರಿಯನ್ನೇ ಸರಿಪಡಿಸಬೇಕಲ್ಲವೇ? ಯಲ್ಲಾಪುರದ ರಸ್ತೆಗಳೇ, ಪ್ರಕೃತಿ ನಿಮಗೆ ಇಷ್ಟೊಂದು ಸೌಂದರ್ಯ ಕೊಟ್ಟಿದೆ. ಕನಿಷ್ಠ ಪ್ರವಾಸಿಗರು ಆ ಸೌಂದರ್ಯ ತಲುಪುವ ದಾರಿಯನ್ನಾದರೂ ಸುಂದರವಾಗಿರಲು ಬಿಡಿ. ಯಲ್ಲಾಪುರದ ರಸ್ತೆಗಳೇ, ನಿಮಗಿದೋ ನಮನ!