ಕಾರವಾರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ನಿಗಾ ಮತ್ತಷ್ಟು ಬಿಗಿಗೊಳಿಸುವಂತೆ ಪಿಸಿ ಮತ್ತು ಪಿಎನ್ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕ್ರಿಮ್ಸ್ನ ಸ್ತ್ರೀರೋಗ ತಜ್ಞ ಡಾ. ನರೇಶ್ ಪಾವಸ್ಕರ್ ಸೂಚಿಸಿದರು.
ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ 82 ಸ್ಕ್ಯಾನಿಂಗ್ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿದ್ದು, ಆಯ್ದ ತಾಲೂಕುಗಳ ಕೇಂದ್ರಗಳಿಗೆ ಅಧಿಕಾರಿಗಳು ಏಕಕಾಲದಲ್ಲಿ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಬೇಕು. ಕೇಂದ್ರಗಳಲ್ಲಿ ನಿರ್ವಹಿಸಲಾಗುತ್ತಿರುವ ಅಗತ್ಯ ದಾಖಲೆಗಳು ಹಾಗೂ ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ಸಂಬಂಧಿತ ನಿಯಮಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಅವರು ಹೇಳಿದರು.
ಹೊಸದಾಗಿ ಸ್ಕ್ಯಾನಿಂಗ್ ಸೆಂಟರ್ಗಳ ನೋಂದಣಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕವೇ ಅನುಮತಿ ನೀಡಬೇಕು. ನಿಯಮಗಳ ಪಾಲನೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಡಾ. ನರೇಶ್ ಪಾವಸ್ಕರ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ ದೊಡ್ಡಮನಿ, ಕ್ರಿಮ್ಸ್ನ ಸಹ ಪ್ರಾಧ್ಯಾಪಕ ಹಾಗೂ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪವನಕುಮಾರ್ ಡಿ., ರೇಡಿಯಾಲಜಿಸ್ಟ್ ಡಾ. ಚಂದನಾ ನಾಯಕ, ಜಿಲ್ಲಾ ವಾರ್ತಾಧಿಕಾರಿ ಬಿ. ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಿನಿ ಬೋರ್ಕರ್, ಸಾಮಾಜಿಕ ಕಾರ್ಯಕರ್ತರಾದ ಯಶೋಧ ಹೆಗಡೆ, ಶ್ರೀಕಾಂತ ಎಂ. ನಾಯ್ಕ, ಹೇಮಲತಾ ತಾಂಡೇಲ್ ಹಾಗೂ ಆರೋಗ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ರತೀಶ್ ಸಿ. ನಾಯ್ಕ ಉಪಸ್ಥಿತರಿದ್ದರು.