ಯಲ್ಲಾಪುರ: ಮಂಚಿಕೇರಿ ವಲಯ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಕ್ರೀಡಾಕೂಟದಲ್ಲಿ ಭರತನಹಳ್ಳಿಯ ಪ್ರಗತಿ ವಿದ್ಯಾಲಯ ಪ್ರೌಢಶಾಲೆ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಪಾತ್ರವಾಗಿದೆ.
ಆ.25 ಹಾಗೂ 27ರಂದು ಪ್ರಗತಿ ವಿದ್ಯಾಲಯ ಭರತನಹಳ್ಳಿಯ ನೂತನ ಕ್ರೀಡಾಂಗಣದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಿಧ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಬಾಲಕ ಹಾಗೂ ಬಾಲಕಿಯರ 100 ಮೀ. ಓಟ ಮತ್ತು ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರ 400 ಮೀ. ಹರ್ಡಲ್ಸ್, ಉದ್ದಜಿಗಿತ ಹಾಗೂ ತ್ರಿವಿಧ ಜಿಗಿತದಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕ ಹಾಗೂ ಬಾಲಕಿಯರ 200 ಮೀ. ಓಟ ಮತ್ತು ರಿಲೇ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬಾಲಕರ 200 ಮೀ. ಓಟ, ಹರ್ಡಲ್ಸ್ ಹಾಗೂ ಎತ್ತರ ಜಿಗಿತ, ಬಾಲಕ ಮತ್ತು ಬಾಲಕಿಯರ ಭರ್ಜೆ ಎಸೆತ, ನಡಿಗೆ, ಚಕ್ರ ಎಸೆತ ಹಾಗೂ ಗುಂಡು ಎಸೆತ ಸ್ಪರ್ಧೆಗಳಲ್ಲೂ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಚೆಸ್‌ನಲ್ಲಿ ಬಾಲಕಿಯರು ಹಾಗೂ ಬಾಲಕರು ದ್ವಿತೀಯ ಮತ್ತು ಪಂಚಮ ಸ್ಥಾನ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ.
ಗುಂಪು ವಿಭಾಗದಲ್ಲಿ ಬಾಲಕ ಹಾಗೂ ಬಾಲಕಿಯರ ವಾಲಿಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ. ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತೋರಿದ ಒಟ್ಟಾರೆ ಸಾಧನೆಯ ಫಲವಾಗಿ ಪ್ರಗತಿ ವಿದ್ಯಾಲಯ ಭರತನಹಳ್ಳಿ ಪ್ರೌಢಶಾಲೆ ಮಂಚಿಕೇರಿ ವಲಯ ಮಟ್ಟದ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ, ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.