ಪ್ರೋಟೀನ್ ಶೇಕ್ ಗೊತ್ತು, ವಿಟಮಿನ್ ಸಪ್ಲಿಮೆಂಟ್ ಬಗ್ಗೆ ಕೇಳಿದ್ದೀರಿ. ಆದರೆ ಈಗ ಬೆಂಗಳೂರಿನಲ್ಲಿ “Peptide Party” ಅನ್ನೋ ಮಾತು ಕೇಳಿಬಂದಾಗ, “ಇದೇನಪ್ಪಾ ಹೊಸ ಪಾರ್ಟಿ?” ಎಂದು ಹುಬ್ಬೇರಿಸುವಂತಾಗಿದೆ.
ಆಗಸ್ಟ್ 29ರಂದು ಬೆಂಗಳೂರಿನ ಕೊರಮಂಗಲದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಗಿದ್ದು, ಅದರ ಬೆನ್ನಲ್ಲೇ ಪೆಪ್‌ಟೈಡ್ ಅಂದರೇನು, ಅದನ್ನು ಯಾಕೆ ಜನರು ಇಷ್ಟೊಂದು ಕುತೂಹಲದಿಂದ ನೋಡುತ್ತಿದ್ದಾರೆ. ನಿಜಕ್ಕೂ ಅದು ಆರೋಗ್ಯದ ಹೊಸ ಅದ್ಭುತವೇ ಎಂಬ ಚರ್ಚೆಯೂ ಶುರುವಾಗಿದೆ. ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಾರ್ಯಕ್ರಮ ಆಯೋಜಕರಿಂದ ಪೆಪ್‌ಟೈಡ್ ಉತ್ಪನ್ನಗಳ ಸಂಯೋಜನೆ, ಮೂಲ, ತಯಾರಕರು, ನಿಯಂತ್ರಣ ಸ್ಥಿತಿ, ಪ್ರಮಾಣ ಹಾಗೂ ಬಳಕೆಯ ಉದ್ದೇಶದ ಬಗ್ಗೆ ವಿವರ ಕೇಳಿತ್ತು.
ಅಸಲಿಗೆ Peptide ಅಂದರೆ ಯಾವುದೋ ವಿಚಿತ್ರ ರಾಸಾಯನಿಕವಲ್ಲ. ನಮ್ಮ ದೇಹದಲ್ಲೇ ಇರುವ ಅಮೈನೋ ಆಮ್ಲಗಳ ಸಣ್ಣ ಸರಪಳಿಗಳೇ ಪೆಪ್‌ಟೈಡ್‌ಗಳು. ಅಮೈನೋ ಆಮ್ಲಗಳು ಸೇರಿ ದೊಡ್ಡ ಸರಪಳಿಯಾದಾಗ ಪ್ರೋಟೀನ್‌ಗಳು ರೂಪುಗೊಳ್ಳುತ್ತವೆ. ಅದೇ ರೀತಿಯಲ್ಲಿ ಸಣ್ಣ ಸರಪಳಿಗಳನ್ನು ಪೆಪ್‌ಟೈಡ್ ಎಂದು ಸರಳವಾಗಿ ಅರ್ಥಮಾಡಿಕೊಳ್ಳಬಹುದು. ದೇಹದಲ್ಲಿ ಹಾರ್ಮೋನ್‌ಗಳು ಸೇರಿದಂತೆ ಹಲವು ಜೈವಿಕ ಪ್ರಕ್ರಿಯೆಗಳಲ್ಲಿ ಪೆಪ್‌ಟೈಡ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ.
ಹಾಗಾದರೆ ಈಗ ಇದ್ದಕ್ಕಿದ್ದಂತೆ ಪೆಪ್‌ಟೈಡ್ ಮಾತೇಕೆ? ಕಾರಣ wellness ಮತ್ತು fitness ಜಗತ್ತು. ತೂಕ ಇಳಿಸಿಕೊಳ್ಳಬೇಕು, ಸ್ನಾಯುಗಳನ್ನು ಬೆಳೆಸಬೇಕು, ವ್ಯಾಯಾಮದ ನಂತರ ದೇಹ ಬೇಗ ಚೇತರಿಸಿಕೊಳ್ಳಬೇಕು, ಚರ್ಮದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬೇಕು, ಇನ್ನಷ್ಟು “ಯಂಗ್” ಆಗಿ ಕಾಣಬೇಕು… ಇಂತಹ ಹಲವು ಆಸೆಗಳಿಗೆ ಪೆಪ್ಟೈಡ್‌ಗಳನ್ನು ಪರಿಹಾರವೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅದರಲ್ಲೂ fitness influencers ಮತ್ತು wellness ಉದ್ಯಮದ ಪ್ರಚಾರದಿಂದ ಈ ಪದ ಸಾಮಾನ್ಯ ಜನರ ಕಿವಿಗೂ ತಲುಪಿದೆ.
ಆದರೆ ಇಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ. “Peptide” ಎಂಬ ಹೆಸರಿದೆ ಎಂದ ಮಾತ್ರಕ್ಕೆ ಅದು ಸುರಕ್ಷಿತವೂ ಅಲ್ಲ, ಪರಿಣಾಮಕಾರಿಯೂ ಅಲ್ಲ. ಕೆಲವು ಪೆಪ್ಟೈಡ್ ಆಧಾರಿತ ಔಷಧಿಗಳು ವೈದ್ಯಕೀಯವಾಗಿ ಅಧ್ಯಯನಗೊಂಡು ನಿರ್ದಿಷ್ಟ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿವೆ.
ಉದಾಹರಣೆಗೆ GLP-1 ವರ್ಗದ ಕೆಲವು ಔಷಧಿಗಳು ತೂಕ ನಿಯಂತ್ರಣ ಮತ್ತು ಕೆಲವು ಚಯಾಪಚಯ ಸಂಬಂಧಿತ ಸಮಸ್ಯೆಗಳ ಚಿಕಿತ್ಸೆಯಲ್ಲಿ ವೈದ್ಯಕೀಯ ಬಳಕೆಯಲ್ಲಿವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ “anti-ageing”, “muscle recovery”, “fat loss” ಅಥವಾ “longevity” ಹೆಸರಿನಲ್ಲಿ ಮಾರಾಟವಾಗುತ್ತಿರುವ ಅನೇಕ ಪೆಪ್ಟೈಡ್‌ಗಳ ಬಗ್ಗೆ ಮಾನವರಲ್ಲಿ ಸಾಕಷ್ಟು ದೃಢವಾದ ಸಂಶೋಧನೆ ಇನ್ನೂ ಇಲ್ಲ.
ಇದರಲ್ಲೇ ದೊಡ್ಡ ಅಪಾಯವೂ ಅಡಗಿದೆ. ಆನ್‌ಲೈನ್‌ನಲ್ಲಿ ಸಿಗುವ ಕೆಲವು ಪೆಪ್ಟೈಡ್‌ಗಳನ್ನು “research use only” ಅಥವಾ wellness ಉತ್ಪನ್ನಗಳೆಂದು ಮಾರಾಟ ಮಾಡಲಾಗುತ್ತದೆ. ಅವುಗಳ ನಿಜವಾದ ಸಂಯೋಜನೆ, ಶುದ್ಧತೆ, ಪ್ರಮಾಣ ಮತ್ತು ಸುರಕ್ಷತೆ ಖಚಿತವಾಗಿರದೇ ಇರಬಹುದು. ವಿಶೇಷವಾಗಿ ವೈದ್ಯರ ಸಲಹೆಯಿಲ್ಲದೆ ಚುಚ್ಚುಮದ್ದಿನ ರೂಪದಲ್ಲಿ ಬಳಸುವುದರಿಂದ ಸೋಂಕು, ತಪ್ಪು ಪ್ರಮಾಣ, ಅಲರ್ಜಿಯ ಪ್ರತಿಕ್ರಿಯೆ ಸೇರಿದಂತೆ ಗಂಭೀರ ಸಮಸ್ಯೆಗಳ ಅಪಾಯವಿದೆ. ನಿಯಂತ್ರಣವಿಲ್ಲದ injectable peptide ಉತ್ಪನ್ನಗಳ ಬಗ್ಗೆ ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುವ ಆರೋಗ್ಯದ ಟ್ರೆಂಡ್‌ಗಳನ್ನು ನಾವು ಎಷ್ಟು ಸುಲಭವಾಗಿ ನಂಬುತ್ತೇವೆ ಎಂಬುದರ ಕುರಿತ ಚರ್ಚೆಯೂ ಹೌದು. ಹೊಸದೊಂದು ಪದ ಟ್ರೆಂಡ್ ಆಯಿತು ಎಂದಾಕ್ಷಣ ಅದನ್ನು ಆರೋಗ್ಯದ ಶಾರ್ಟ್‌ಕಟ್ ಎಂದುಕೊಳ್ಳಬೇಕಿಲ್ಲ. ಪೆಪ್ಟೈಡ್‌ಗಳಲ್ಲಿ ನಿಜಕ್ಕೂ ವಿಜ್ಞಾನವಿದೆ, ವೈದ್ಯಕೀಯವಾಗಿ ಸಾಬೀತಾಗಿರುವ ಬಳಕೆಗಳೂ ಇವೆ. ಆದರೆ ಪ್ರತಿಯೊಂದು ಪೆಪ್ಟೈಡ್ ಉತ್ಪನ್ನವೂ ಒಂದೇ ಅಲ್ಲ. ಯಾವುದು ಔಷಧಿ, ಯಾವುದು ಸಂಶೋಧನಾ ಹಂತದಲ್ಲಿದೆ, ಯಾವುದು ಕೇವಲ ಮಾರ್ಕೆಟಿಂಗ್ ಇದರ ವ್ಯತ್ಯಾಸ ತಿಳಿದುಕೊಳ್ಳುವುದು ಮುಖ್ಯ.
ಕೊನೆಗೆ, ಆರೋಗ್ಯದ ವಿಷಯದಲ್ಲಿ ಒಂದು ಸರಳ ನಿಯಮ ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಟ್ರೆಂಡ್ ಆಗಿದೆ ಎಂಬ ಕಾರಣಕ್ಕೆ ದೇಹದ ಮೇಲೆ ಪ್ರಯೋಗ ಮಾಡಬೇಡಿ. Instagramನಲ್ಲಿ ಯಾರಿಗೋ ಕೆಲಸ ಮಾಡಿದೆ ಎಂಬುದು ನಮಗೂ ಕೆಲಸ ಮಾಡುತ್ತದೆ ಎಂಬ ಖಾತರಿಯಲ್ಲ. ದೇಹಕ್ಕೆ ಬೇಕಾದ “ಶಾರ್ಟ್‌ಕಟ್” ಹುಡುಕುವ ಮೊದಲು, ನಿಜವಾಗಿಯೂ ನಮಗೆ ಅದು ಬೇಕೇ ಎಂದು ವೈದ್ಯರ ಬಳಿ ಕೇಳುವುದು ಬಹುಶಃ ಯಾವ ಪೆಪ್ಟೈಡ್‌ಗಿಂತಲೂ ಉತ್ತಮ ಆರೋಗ್ಯದ ಮೊದಲ ಹೆಜ್ಜೆಯಾಗಬಹುದು!