ಹೊನ್ನಾವರ: ವಿದ್ಯುತ್ ದುರಸ್ತಿ ಕಾರ್ಯಕ್ಕೆ ತೆರಳಿದ್ದ ಎಲೆಕ್ಟ್ರಿಷಿಯನ್ ಒಬ್ಬರು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಕರೆಂಟ್ ಶಾಕ್‌ಗೆ ಒಳಗಾಗಿ ಮೃ*ತಪಟ್ಟ ಘಟನೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಣಸಾಲೆಯಲ್ಲಿ ನಡೆದಿದೆ.
ಬಣಸಾಲೆ ಗ್ರಾಮದ 46 ವರ್ಷದ ರಾಜು ಪರಮೇಶ್ವರ ನಾಯ್ಕ ಮೃತರು. ಅವರು ತಮ್ಮ ಎದುರಿನ ಮನೆಯ ನಿವಾಸಿ ನಾಗವೇಣಿ ರಾಮಕೃಷ್ಣ ನಾಯ್ಕ ಅವರ ಮನೆಗೆ ಆಗಸ್ಟ್ 29ರಂದು ಬೆಳಿಗ್ಗೆ ಸುಮಾರು 9.20ರ ವೇಳೆಗೆ ವಿದ್ಯುತ್ ದುರಸ್ತಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.
ಈ ವೇಳೆ ವಿದ್ಯುತ್ ಸರಬರಾಜು ಹೊಂದಿದ್ದ ವೈರ್ ಆಕಸ್ಮಿಕವಾಗಿ ಸ್ಪರ್ಶಿಸಿದ ಪರಿಣಾಮ ರಾಜು ಅವರಿಗೆ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಬೆಳಿಗ್ಗೆ 10.20ರ ಸುಮಾರಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರಿಶೀಲಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರ ಸಾವಿನ ಕುರಿತು ಯಾವುದೇ ಅನುಮಾನವಿಲ್ಲ ಎಂದು ಅವರ ಸಹೋದರ ಸಂತೋಷ ಪರಮೇಶ್ವರ ನಾಯ್ಕ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.