ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಅಂಗಾಂಗ ಪತ್ತೆ; ಇಬ್ಬರ ಬಂಧನ
ಯಲ್ಲಾಪುರ: ಪ್ಯಾಂಗೋಲಿನ್ ಚಿಪ್ಪುಗಳಿಂದ ಹಿಡಿದು ಹುಲಿ ಹಾಗೂ ಚಿರತೆಯ ಉಗುರು-ಹಲ್ಲುಗಳವರೆಗೆ ಅಕ್ರಮ ವನ್ಯಜೀವಿ ಉತ್ಪನ್ನಗಳ ದೊಡ್ಡ ಸಂಗ್ರಹವೇ ಪತ್ತೆಯಾಗಿರುವ ಘಟನೆ ಯಲ್ಲಾಪುರ ತಾಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ನಡೆದಿದೆ.
ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಶಿರಸಿ ಅರಣ್ಯ ಸಂಚಾರಿ ದಳ (FMS) ಅಧಿಕಾರಿಗಳು, ವನ್ಯಜೀವಿ ಉತ್ಪನ್ನಗಳನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ವೇಳೆ ಬರೋಬ್ಬರಿ 15.748 ಕೆ.ಜಿ. ಪ್ಯಾಂಗೋಲಿನ್ (ಚಿಪ್ಪುಹಂದಿ) ಚಿಪ್ಪುಗಳು, ಎರಡು ಭಾರತೀಯ ಕಾಡೆಮ್ಮೆ ಕೊಂಬುಗಳು, ಎಂಟು ಹುಲಿ ಉಗುರುಗಳು, ಎರಡು ಹುಲಿ ಹಲ್ಲುಗಳು, 12 ಚಿರತೆ ಉಗುರುಗಳು, ಮೂರು ಚಿರತೆ ಹಲ್ಲುಗಳು ಹಾಗೂ ಆರು ಕಾಡುಹಂದಿ ಹಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇಷ್ಟೇ ಅಲ್ಲದೆ, ವನ್ಯಜೀವಿ ಉತ್ಪನ್ನಗಳ ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ಒಂದು ಬೈಕ್ ಹಾಗೂ ಒಂದು ಸ್ಕೂಟರ್ ಅನ್ನೂ ಅರಣ್ಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವಶಪಡಿಸಿಕೊಂಡಿರುವ ವನ್ಯಜೀವಿ ಉತ್ಪನ್ನಗಳ ಮೂಲ ಯಾವುದು, ಅವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಯಾರಿದ್ದಾರೆ ಎಂಬ ಕುರಿತು ಅರಣ್ಯ ಸಂಚಾರಿ ದಳ ತನಿಖೆ ಮುಂದುವರಿಸಿದೆ.
ಪ್ರಾಥಮಿಕ ತನಿಖೆಯಲ್ಲಿ ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಕರಣವು ಕೇವಲ ಇಬ್ಬರ ಕೃತ್ಯಕ್ಕೆ ಸೀಮಿತವಾಗಿದೆಯೇ ಅಥವಾ ಇದರ ಹಿಂದೆ ದೊಡ್ಡ ಮಟ್ಟದ ವನ್ಯಜೀವಿ ಕಳ್ಳಸಾಗಣೆ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ.
ಬಂಧಿತ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.