ಯಲ್ಲಾಪುರ: ಗ್ರಾಮೀಣ ಭಾಗದ ಜನರಿಗೆ ವಸತಿ ಉದ್ದೇಶಕ್ಕಾಗಿ ನೀಡಲಾಗಿರುವ ಜಾಗಗಳ ಮನೆ ನಂಬರ್‌ಗಳನ್ನು ರದ್ದುಗೊಳಿಸಿ ತೆರಿಗೆ ಆಕರಣೆ ಮಾಡದಂತೆ ಸೂಚಿಸಿರುವ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳವಾರ ತಾಲೂಕಿನ ಟಿಎಂಎಸ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ, ಅರಣ್ಯ ಹಾಗೂ ಸರ್ಕಾರದ ಒಡೆತನ ಮತ್ತು ನಿಯಂತ್ರಣದಲ್ಲಿರುವ ಜಾಗಗಳಲ್ಲಿ ವಸತಿ ಉದ್ದೇಶಕ್ಕಾಗಿ ನೀಡಲಾಗಿರುವ ಮನೆ ನಂಬರ್‌ಗಳನ್ನು ರದ್ದುಗೊಳಿಸುವ ಹಾಗೂ ತೆರಿಗೆ ಆಕರಣೆ ಮಾಡದಿರುವ ನಿರ್ಧಾರ ಗ್ರಾಮೀಣ ಜನರನ್ನು ವಸತಿ ರಹಿತರನ್ನಾಗಿ ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಅತಿಕ್ರಮಣ ಪ್ರದೇಶದಲ್ಲಿರುವ ಮನೆಗಳಿಗೆ ದೊರೆತಿರುವ ಮನೆ ನಂಬರ್‌ಗಳು ಅಲ್ಲಿನ ನಿವಾಸಿಗಳಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪ್ರಮುಖ ಆಧಾರವಾಗಿವೆ. ಮನೆ ನಂಬರ್ ಸೇರಿದಂತೆ ಇತರ ದಾಖಲೆಗಳನ್ನು ರದ್ದುಗೊಳಿಸಿದರೆ ಪಡಿತರ ಚೀಟಿ, ವಿದ್ಯುತ್ ಸಂಪರ್ಕ, ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಹಾಗೂ ಆಸ್ತಿ ನೋಂದಣಿ ಸೇರಿದಂತೆ ಹಲವು ಸೌಲಭ್ಯಗಳಿಂದ ಜನರು ವಂಚಿತರಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಆದ್ದರಿಂದ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಹರಿಪ್ರಕಾಶ ಕೋಣೆಮನೆ ಎಚ್ಚರಿಕೆ ನೀಡಿದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಸರ್ಕಾರ ಬಡವರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ, ಗ್ಯಾರಂಟಿ ಯೋಜನೆಗಳ ಆಮಿಷ ತೋರಿಸಿ ಇದೀಗ ಬಡವರ ಮನೆಗಳನ್ನು ಕಿತ್ತುಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಮತ್ತೊಂದೆಡೆ ಬಡವರಿಗೆ ಮೀಸಲಿರುವ ಮನೆಗಳನ್ನು ಶ್ರೀಮಂತರಿಗೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಮುಖರಾದ ಉಮೇಶ್ ಭಾಗ್ವತ್, ರಾಘವೇಂದ್ರ ಭಟ್ ಹಾಸಣಗಿ, ಕೆ.ಟಿ. ಹೆಗಡೆ, ವೆಂಕಟರಮಣ ಬೆಳ್ಳಿ, ಗಣೇಶ ಹೆಗಡೆ, ಸುಬ್ಬಣ್ಣ ಉದ್ದಾಬೈಲ, ಮಹೇಶ ದೇಸಾಯಿ, ವಿಶ್ವನಾಥ ಹಳೆಮನೆ ಮುಂತಾದವರು ಉಪಸ್ಥಿತರಿದ್ದರು.