ಶಿರಸಿ: ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ, ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವ ಎಸಳೆಯ ಸಂಜಯ ಜಗದೀಶ ನಾಯ್ಕ್ ಅವರನ್ನು ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಉತ್ತಮ ಜೀವನಶೈಲಿಗೆ ದಾರಿ ತೋರಿಸುವ ಸಾಧನೆಯಾಗಿದೆ. ಪ್ರತಿನಿತ್ಯ ಯೋಗ, ಧ್ಯಾನ ಹಾಗೂ ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳುವವರು ದುಶ್ಚಟಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ. ಸಂಜಯ್ ಅವರ ಸಾಧನೆಯನ್ನು ಕಂಡು ಇನ್ನಷ್ಟು ಯುವಕರು ಪ್ರೇರಣೆ ಪಡೆಯಬೇಕು ಎಂದು ಹೇಳಿದರು.
ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು, ತಪ್ಪು ಮಾಡಿದಾಗ ಅದನ್ನು ತಿದ್ದಿಸುವುದು ನಾಗರಿಕರ ಕರ್ತವ್ಯವಾಗಿದೆ. ಸಂಜಯ್ ಅವರ ಸಾಧನೆಯ ಹಿಂದೆ ತಂದೆ-ತಾಯಿಯ ಶ್ರಮವೂ ಸಾಕಷ್ಟಿದೆ. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಊರು ಹಾಗೂ ನಾಡಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ ಅವರು, ಸಂಜಯ್ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆಯನ್ನೂ ನೀಡಿದರು.
ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ತೆರಳುತ್ತಿರುವ ಸಂಜಯ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ದೊರೆತಾಗ ಅವರು ಇನ್ನಷ್ಟು ಸಾಧನೆ ಮಾಡಲು ಉತ್ಸಾಹ ಪಡೆಯುತ್ತಾರೆ. ಇದೇ ಉದ್ದೇಶದಿಂದ ಸಂಜಯ್ ಅವರನ್ನು ಸನ್ಮಾನಿಸಲಾಗಿದೆ ಎಂದರು.
ಗ್ರಾಮೀಣ ಅಥವಾ ನಗರ ಪ್ರದೇಶ ಎನ್ನದೆ ಸಂಕಷ್ಟದಲ್ಲಿರುವವರಿಗೆ ಅನಂತಮೂರ್ತಿ ಹೆಗಡೆ ಅವರು ಸಹಕಾರ ನೀಡುತ್ತಿದ್ದಾರೆ. ಕ್ರೀಡಾಪಟುಗಳ ಸಾಧನೆಯ ಹಿಂದೆ ಜನರ ಪ್ರೋತ್ಸಾಹವೂ ಮುಖ್ಯವಾಗಿದ್ದು, ಸಂಜಯ್ ಅವರ ಸಾಧನೆಯಲ್ಲೂ ನಾವೆಲ್ಲರೂ ಅವರೊಂದಿಗೆ ಇರುತ್ತೇವೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗಪಟು ಸಂಜಯ್ ನಾಯ್ಕ್, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವು ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಏಳನೇ ತರಗತಿಯಿಂದ ಯೋಗಾಭ್ಯಾಸ ಮಾಡುತ್ತಿದ್ದು, ಈಗಾಗಲೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ತುಮಕೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ, ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.
ತಮ್ಮ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ ಬಿಜೆಪಿ ಗ್ರಾಮೀಣ ಮಂಡಳ, ಅನಂತಮೂರ್ತಿ ಹೆಗಡೆ ಹಾಗೂ ಊರಿನ ಗಣ್ಯರಿಗೆ ಸಂಜಯ್ ನಾಯ್ಕ್ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುಧೀರ್ ದೇವಾಡಿಗ ಹಾಗೂ ಎಸಳೆ ಗ್ರಾಮಸ್ಥರು ನಾಗರಿಕ ಸನ್ಮಾನ ನೆರವೇರಿಸಿದರು. ನಾಗಪ್ಪ ದೇವಾಡಿಗ, ರತ್ನಾ ಶೆಟ್ಟಿ, ಶಿವರಾಮ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.