ಹೊನ್ನಾವರ: ಗುಜರಿ ಸಾಮಾನುಗಳನ್ನು ವಾಹನಕ್ಕೆ ಲೋಡ್ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ಇಬ್ಬರು ಸೇರಿ ಅವಾಚ್ಯವಾಗಿ ನಿಂದಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಲಾಗಿದೆ.
ಚಂದಾವರದ ಹಾಲಿಗದ್ದೆ ನಿವಾಸಿ, 48 ವರ್ಷದ ಗುಜರಿ ವ್ಯಾಪಾರಿ ಜಮಾಲ್ ಸಾಬ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಜುಲೈ 7ರಂದು ಬೆಳಗ್ಗೆ ಚಂದಾವರ ನಾಕಾ ಸಮೀಪದಲ್ಲಿರುವ ತಮ್ಮ ಗುಜರಿ ಅಂಗಡಿಯ ಎದುರು ಗುಜರಿ ಸಾಮಾನುಗಳನ್ನು ವಾಹನಕ್ಕೆ ಲೋಡ್ ಮಾಡುತ್ತಿದ್ದಾಗ ಫಾರೂಕ್ ಇಸ್ಮಾಯಿಲ್ ಸಿಕಂದರ್ ಹಾಗೂ ಇಸ್ಮಾಯಿಲ್ ಫಾರೂಕ್ ಸಿಕಂದರ್ ಎಂಬವರು ಅಲ್ಲಿಗೆ ಬಂದಿದ್ದಾರೆ.
ಇಬ್ಬರೂ ಸೇರಿ ಜಮಾಲ್ ಸಾಬ್ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ನಿಂದಿಸಿ, ಗುಜರಿ ಸಾಮಾನುಗಳನ್ನು ಲೋಡ್ ಮಾಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಕುರಿತು ಜಮಾಲ್ ಸಾಬ್ ಅವರು ಜುಲೈ 9ರಂದು ಹೊನ್ನಾವರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ನ್ಯಾಯಾಲಯದ ಅನುಮತಿ ಪಡೆದು ಬಂದಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುವುದು ಎಂದು ದೂರುದಾರರಿಗೆ ತಿಳಿಸಲಾಗಿತ್ತು.
ನಂತರ ದೂರುದಾರರು ನ್ಯಾಯಾಲಯದಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ಪಡೆದುಕೊಂಡು ಬಂದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 18ರಂದು ಎಫ್ಐಆರ್ ದಾಖಲಿಸಿ ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ.