ಸೆ.11ರಿಂದ 14ರವರೆಗೆ ಬ್ಯಾಂಕ್ ಶಾಖೆಗಳಿಗೆ ರಜೆ
ಬೆಂಗಳೂರು: ಬ್ಯಾಂಕ್‌ಗೆ ಹೋಗಿ ಯಾವುದಾದರೂ ಕೆಲಸ ಮಾಡಿಸಿಕೊಳ್ಳಬೇಕಿದೆಯೇ? ಹಾಗಿದ್ದರೆ ನೀವು ಸೆ. 15ರವರೆಗೂ ಕಾಯಬೇಕು! ಯಾಕೆಂದರೆ, ಸೆಪ್ಟೆಂಬರ್ 11ರಿಂದ 14ರವರೆಗೆ ಸತತ ನಾಲ್ಕು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ವಾರಕ್ಕೆ ಐದು ದಿನಗಳ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಸೆಪ್ಟೆಂಬರ್ 11ರಂದು ದೇಶಾದ್ಯಂತ ಮುಷ್ಕರ ನಡೆಸಲಿದ್ದಾರೆ. ಮುಷ್ಕರದ ಮರುದಿನವೇ ಎರಡನೇ ಶನಿವಾರದ ರಜೆ, ಬಳಿಕ ಭಾನುವಾರದ ವಾರದ ರಜೆ ಹಾಗೂ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಹಬ್ಬದ ರಜೆ ಇರುವುದರಿಂದ ಸತತ ನಾಲ್ಕು ದಿನ ಬ್ಯಾಂಕ್ ಶಾಖೆಗಳಿಗೆ ತೆರಳಿ ವ್ಯವಹಾರ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಲಿದೆ.
ಸೆಪ್ಟೆಂಬರ್ 11, ಶುಕ್ರವಾರ – ಬ್ಯಾಂಕ್ ನೌಕರರ ಮುಷ್ಕರ
ಸೆಪ್ಟೆಂಬರ್ 12, ಶನಿವಾರ – ಎರಡನೇ ಶನಿವಾರದ ರಜೆ
ಸೆಪ್ಟೆಂಬರ್ 13, ಭಾನುವಾರ – ವಾರದ ರಜೆ
ಸೆಪ್ಟೆಂಬರ್ 14, ಸೋಮವಾರ – ಗಣೇಶ ಚತುರ್ಥಿ ರಜೆ
ಸೆಪ್ಟೆಂಬರ್ 11, 2026ರಂದು ದೇಶಾದ್ಯಂತ ಬ್ಯಾಂಕ್ ನೌಕರರು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಮುಷ್ಕರವನ್ನು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ಹೀಗಾಗಿ ಹಣ ಜಮೆ ಮಾಡುವುದು, ಹಣ ಪಡೆಯುವುದು, ಚೆಕ್ ವ್ಯವಹಾರ, ಡಿಡಿ, ಬ್ಯಾಂಕ್ ದಾಖಲೆಗಳಿಗೆ ಸಂಬಂಧಿಸಿದ ಕೆಲಸ, ಸಾಲ ಅಥವಾ ಇತರೆ ಯಾವುದೇ ಶಾಖೆಗೆ ತೆರಳಿ ಮಾಡಿಸಬೇಕಾದ ಬ್ಯಾಂಕ್ ಕೆಲಸಗಳಿದ್ದರೆ ಸೆ. 15ರವರೆಗೆ ಕಾಯಲೇಬೇಕು.
ತುರ್ತು ಸಂದರ್ಭಗಳಲ್ಲಿ ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಇತರ ಡಿಜಿಟಲ್ ಸೇವೆಗಳನ್ನು ಬಳಸಬಹುದಾದರೂ, ಶಾಖೆಗೆ ನೇರವಾಗಿ ಭೇಟಿ ನೀಡಿ ಮಾಡಿಸಬೇಕಾದ ಕೆಲಸಗಳಿದ್ದರೆ ನಾಲ್ಕು ದಿನಗಳವರೆಗೆ ಕಾಯಬೇಕಾಗಿದೆ.