ಶಿರಸಿ/ಗೋವಾ: ರಾಜಕೀಯ, ಸಾರ್ವಜನಿಕ ಬದುಕಿನ ಜಂಜಾಟದ ನಡುವೆ ಆಧ್ಯಾತ್ಮಿಕ ನೆಮ್ಮದಿಗಾಗಿ ಶಾಸಕ ಭೀಮಣ್ಣ ಟಿ. ನಾಯ್ಕ ಅವರು ಕುಟುಂಬ ಸಮೇತರಾಗಿ ಗೋವಾದ ಪವಿತ್ರ ಶ್ರೀ ಸಂಸ್ಥಾನ ಪರ್ತಗಾಳಿ ಜೀವೋತ್ತಮ ಮಠಕ್ಕೆ ಭೇಟಿ ನೀಡಿ, ಚಾತುರ್ಮಾಸ್ಯ ವ್ರತದಲ್ಲಿರುವ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ದರ್ಶನ ಪಡೆದು ಗುರುವಂದನೆ ಸಲ್ಲಿಸಿದರು.
ಮಠದ ಪವಿತ್ರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಭೀಮಣ್ಣ ನಾಯ್ಕ ಅವರು ಶ್ರೀಗಳ ದಿವ್ಯ ಚರಣಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಬಳಿಕ ಸ್ವಾಮೀಜಿಯವರಿಂದ ಅನುಗ್ರಹ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಜನತೆಯ ಸುಖ-ಶಾಂತಿ, ಸಮೃದ್ಧಿ ಮತ್ತು ಸರ್ವರ ಆಯುರಾರೋಗ್ಯಕ್ಕಾಗಿ ಶ್ರೀಗಳ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಾರ್ವಜನಿಕ ಬದುಕಿನಲ್ಲಿ ಜನರ ಆಶಯಗಳಿಗೆ ಸ್ಪಂದಿಸುವುದರ ಜೊತೆಗೆ ಆಧ್ಯಾತ್ಮಿಕ ಕ್ಷೇತ್ರಗಳ ಸಾನ್ನಿಧ್ಯವೂ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂಬ ರೀತಿಯಲ್ಲಿ ಶಾಸಕರ ಈ ಭೇಟಿಯು ಗಮನ ಸೆಳೆಯಿತು.
ಪರ್ತಗಾಳಿ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಶಾಸಕರು, ಶ್ರೀಗಳ ಆಶೀರ್ವಾದ ಪಡೆದುಕೊಂಡು ಬಳಿಕ ಮಠದ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರ ಕುಟುಂಬಸ್ಥರು ಹಾಗೂ ಮಠದ ಪ್ರಮುಖರು ಉಪಸ್ಥಿತರಿದ್ದರು.