ಬೆಂಗಳೂರು: ಬರ ಪರಿಸ್ಥಿತಿಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ರೈತರಿಗೆ ಕೊಂಚ ಉಸಿರು ನೀಡುವಂತಹ ನಿರ್ಧಾರವನ್ನು ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (SLBC) ಕೈಗೊಂಡಿದೆ. ಬರಪೀಡಿತ ಪ್ರದೇಶಗಳ ಅರ್ಹ ರೈತರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ 12 ತಿಂಗಳ ಮೊರಟೋರಿಯಂ ನೀಡಲು ಬ್ಯಾಂಕಿಂಗ್ ವಲಯ ತಾತ್ವಿಕ ಒಪ್ಪಿಗೆ ನೀಡಿದೆ.
ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ ಬರಪೀಡಿತ ರೈತರಿಗೆ ಸಮಗ್ರ ಪರಿಹಾರ ಪ್ಯಾಕೇಜ್ ನೀಡುವ ಕುರಿತು ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ 24 ಜಿಲ್ಲೆಗಳ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಈ ಪೈಕಿ 89 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳು ಮಧ್ಯಮ ಬರದಿಂದ ಬಾಧಿತವಾಗಿವೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಅನ್ವಯ ಅರ್ಹ ರೈತ ಸಾಲಗಾರರಿಗೆ ಈ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲು ಬ್ಯಾಂಕ್‌ಗಳು ಒಪ್ಪಿಕೊಂಡಿವೆ. ಅದರಂತೆ, ಸಾಲದ ಕಂತು ಮರುಪಾವತಿಗೆ 12 ತಿಂಗಳ ಕಾಲಾವಕಾಶ ಸಿಗಲಿದೆ.
ಇದರ ಜೊತೆಗೆ ಸಾಲದ ಒಟ್ಟು ಮರುಪಾವತಿ ಅವಧಿಯನ್ನೂ ವಿಸ್ತರಿಸಲಾಗುತ್ತದೆ. ಮಧ್ಯಮ ಬರಪೀಡಿತ ತಾಲೂಕುಗಳಲ್ಲಿ ಗರಿಷ್ಠ 36 ತಿಂಗಳವರೆಗೆ ಹಾಗೂ ತೀವ್ರ ಬರಪೀಡಿತ ತಾಲೂಕುಗಳಲ್ಲಿ ಗರಿಷ್ಠ 60 ತಿಂಗಳವರೆಗೆ ಮರುಪಾವತಿ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ಈ ಯೋಜನೆ ಕೇವಲ ಸಾಮಾನ್ಯ ಕೃಷಿ ಸಾಲಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲಗಳು, ಹೂಡಿಕೆ ಆಧಾರಿತ ಕೃಷಿ ಸಾಲಗಳು, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ ಸೇರಿದಂತೆ ವಿವಿಧ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನೀಡಿರುವ ಅರ್ಹ ಸಾಲಗಳೂ ಇದರ ವ್ಯಾಪ್ತಿಗೆ ಬರಲಿವೆ.
ಬರದಿಂದ ಹಳೆಯ ಸಾಲದ ಕಂತು ಕಟ್ಟಲು ಸಾಧ್ಯವಾಗದ ರೈತರಿಗೆ ಮರುಪಾವತಿ ಮುಂದೂಡುವುದರ ಜೊತೆಗೆ, ಅವರ ತುರ್ತು ಅಗತ್ಯಗಳಿಗೆ ಅನುಗುಣವಾಗಿ ಬ್ಯಾಂಕ್‌ಗಳ ನಿಯಮಾವಳಿಯಂತೆ ಹೊಸ ಸಾಲ ನೀಡುವ ಅವಕಾಶವನ್ನೂ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಬ್ಯಾಂಕ್‌ಗಳು ಅಕ್ಟೋಬರ್ 11ರೊಳಗೆ ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸಬೇಕು. 2027ರ ಜನವರಿ 9ರೊಳಗೆ ಪರಿಹಾರ ಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಗಿದೆ.