ಯಲ್ಲಾಪುರ: ಮಲೆನಾಡಿನ ಕಾಡುಗಳಲ್ಲಿ ಮರಗಳ್ಳತನ, ವನ್ಯಜೀವಿಗಳ ಬೇಟೆ, ವನ್ಯಜೀವಿ ಅಂಗಾಂಗಗಳ ಅಕ್ರಮ ಸಾಗಾಟದಂತಹ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇವೆ. ಇದೀಗ ಯಲ್ಲಾಪುರ ತಾಲೂಕಿನ ಉಪಳೇಶ್ವರದಲ್ಲಿ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆಗಳ ಉಗುರು, ಹಲ್ಲು ಸೇರಿದಂತೆ ದೊಡ್ಡ ಪ್ರಮಾಣದ ವನ್ಯಜೀವಿ ಉತ್ಪನ್ನಗಳು ಪತ್ತೆಯಾಗಿರುವ ಪ್ರಕರಣವೂ ಇದೇ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ.
ಶಿರಸಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿರುವುದು ಅರಣ್ಯ ಇಲಾಖೆಯ ದೃಷ್ಟಿಯಿಂದ ಮಹತ್ವದ ಕಾರ್ಯಾಚರಣೆಯೇ ಸರಿ. ಆದರೆ ಈ ಪ್ರಕರಣದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಮತ್ತೊಂದು ಪ್ರಶ್ನೆ ಕೇಳಿಬರುತ್ತಿದೆ. ಇಷ್ಟೊಂದು ಪ್ರಮಾಣದ ವನ್ಯಜೀವಿ ಉತ್ಪನ್ನಗಳು ಸ್ಥಳೀಯ ಪ್ರದೇಶದಲ್ಲೇ ಸಂಗ್ರಹವಾಗುವವರೆಗೆ ಸ್ಥಳೀಯ ಅರಣ್ಯ ವ್ಯವಸ್ಥೆಗೆ ಇದರ ಸುಳಿವು ಇರಲಿಲ್ಲವೇ?
ಉಪಳೇಶ್ವರದಲ್ಲಿ ಸಿಕ್ಕಿರುವುದು ಒಂದೆರಡು ವನ್ಯಜೀವಿ ವಸ್ತುಗಳಲ್ಲ. ಬರೋಬ್ಬರಿ 15.748 ಕೆ.ಜಿ. ಪ್ಯಾಂಗೋಲಿನ್ ಚಿಪ್ಪುಗಳು, ಎರಡು ಭಾರತೀಯ ಕಾಡೆಮ್ಮೆ ಕೊಂಬುಗಳು, ಎಂಟು ಹುಲಿ ಉಗುರುಗಳು, ಎರಡು ಹುಲಿ ಹಲ್ಲುಗಳು, 12 ಚಿರತೆ ಉಗುರುಗಳು, ಮೂರು ಚಿರತೆ ಹಲ್ಲುಗಳು ಹಾಗೂ ಆರು ಕಾಡುಹಂದಿ ಹಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕರಣದ ವಿವರಗಳು ತಿಳಿಸುತ್ತವೆ.
ಇವು ಬೇರೆ ಬೇರೆ ಪ್ರಾಣಿಗಳಿಗೆ ಸೇರಿದ ವಿವಿಧ ಬಗೆಯ ವನ್ಯಜೀವಿ ಉತ್ಪನ್ನಗಳು. ಅಂದರೆ, ಇವೆಲ್ಲವೂ ಒಂದೇ ದಿನದಲ್ಲಿ ಯಾರದೋ ಕೈಗೆ ಸಿಕ್ಕ ವಸ್ತುಗಳಲ್ಲ ಎಂಬ ಸಹಜ ಅನುಮಾನ ಮೂಡುತ್ತದೆ. ಇವುಗಳನ್ನು ಸಂಗ್ರಹಿಸಲು ಸಮಯ ಬೇಕು, ಸಂಪರ್ಕಗಳು ಬೇಕು, ಸಾಗಾಟಕ್ಕೆ ಮಾರ್ಗ ಬೇಕು ಮತ್ತು ಖರೀದಿದಾರರ ಜಾಲವೂ ಇರಬೇಕಾಗುತ್ತದೆ.
ಇಲ್ಲಿಯೇ ಸ್ಥಳೀಯ ಅರಣ್ಯ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮೂಡುತ್ತದೆ. ಈ ಚಟುವಟಿಕೆಗಳು ಇಷ್ಟು ದಿನಗಳಿಂದಲೂ ನಡೆಯುತ್ತಿದ್ದವೇ? ನಡೆಯುತ್ತಿದ್ದರೆ ಸ್ಥಳೀಯ ಸಿಬ್ಬಂದಿಗೆ ಯಾವುದೇ ಮಾಹಿತಿ ಇರಲಿಲ್ಲವೇ ಅಥವಾ ಮಾಹಿತಿ ಇದ್ದರೂ ದೊಡ್ಡ ಮಟ್ಟದ ಕಾರ್ಯಾಚರಣೆಗೆ ಅರಣ್ಯ ಸಂಚಾರಿ ದಳದ ನೆರವು ಅಗತ್ಯವಾಯಿತೇ?
ಅರಣ್ಯ ಸಂಚಾರಿ ದಳ ಎಂದರೆ ಸ್ಥಳೀಯ ಅರಣ್ಯ ಇಲಾಖೆಗೆ ಪರ್ಯಾಯವಾಗಿ ಕೆಲಸ ಮಾಡುವ ಪ್ರತ್ಯೇಕ ವ್ಯವಸ್ಥೆ ಎಂಬುದೂ ಅಲ್ಲ. ಅರಣ್ಯ ಅಪರಾಧಗಳ ಪತ್ತೆ ಮತ್ತು ತಡೆ, ಮರ ಹಾಗೂ ಇತರ ಅರಣ್ಯ ಉತ್ಪನ್ನಗಳ ಅಕ್ರಮ ಸಾಗಾಟದ ಮೇಲೆ ನಿಗಾ, ಬೇಟೆ ಮತ್ತು ವನ್ಯಜೀವಿ ಅಪರಾಧಗಳ ಪತ್ತೆ, ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಹಾಗೂ ಅಗತ್ಯವಿದ್ದಾಗ ಕಾರ್ಯಾಚರಣೆ ನಡೆಸುವುದು ಅದರ ಪ್ರಮುಖ ಜವಾಬ್ದಾರಿಗಳಲ್ಲಿದೆ.
ಸ್ಥಳೀಯ ಅರಣ್ಯ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಇಂತಹ ಅಪರಾಧಗಳನ್ನು ತಡೆಯುವ ವ್ಯವಸ್ಥೆಯೂ ಇದರ ಭಾಗವಾಗಿದೆ. ಹೀಗಾಗಿ ಶಿರಸಿ ಅರಣ್ಯ ಸಂಚಾರಿ ದಳ ಉಪಳೇಶ್ವರಕ್ಕೆ ಬಂದು ಕಾರ್ಯಾಚರಣೆ ನಡೆಸಿದ್ದಾರೆ ಎಂದ ಮಾತ್ರಕ್ಕೆ ಸ್ಥಳೀಯ ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದಲ್ಲ. FMSಗೆ ಸಿಕ್ಕ ಮಾಹಿತಿ ಸ್ಥಳೀಯ ವ್ಯವಸ್ಥೆಗೆ ಏಕೆ ಸಿಗಲಿಲ್ಲ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರಲ್ಲಿ ಮೂಡತೊಡಗಿದೆ.
ಏಕೆಂದರೆ ಅರಣ್ಯ ಅಪರಾಧವನ್ನು ತಡೆಯುವುದು ಎಂದರೆ ಪ್ರಕರಣ ನಡೆದ ನಂತರ ವನ್ಯಜೀವಿ ಉತ್ಪನ್ನಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸುವುದಷ್ಟೇ ಅಲ್ಲ. ಇಂತಹ ಅಕ್ರಮಗಳ ಹಿಂದೆ ಇರುವ ಜಾಲವನ್ನು ಮುಂಚಿತವಾಗಿ ಪತ್ತೆಹಚ್ಚುವುದು ಕೂಡ ಅಷ್ಟೇ ಮುಖ್ಯ. ಕಾಡಿನೊಳಗೆ ಬೇಟೆಯಾಡಿದವರು ಯಾರು, ಪ್ರಾಣಿಗಳ ಅಂಗಾಂಗಗಳನ್ನು ಸಂಗ್ರಹಿಸಿದವರು ಯಾರು, ಅವುಗಳನ್ನು ಯಾರಿಗೆ ಮಾರಾಟ ಮಾಡಲಾಗುತ್ತಿತ್ತು, ಯಾವ ಮಾರ್ಗದಲ್ಲಿ ಸಾಗಿಸಲಾಗುತ್ತಿತ್ತು, ಸ್ಥಳೀಯವಾಗಿ ಯಾರ್ಯಾರು ಈ ವ್ಯವಹಾರದಲ್ಲಿ ಸಂಪರ್ಕ ಹೊಂದಿದ್ದಾರೆ ಇವೆಲ್ಲವನ್ನೂ ಪತ್ತೆಹಚ್ಚಿದಾಗ ಮಾತ್ರ ವನ್ಯಜೀವಿ ಕಳ್ಳಸಾಗಣೆಯ ಬೇರುಗಳನ್ನು ಕತ್ತರಿಸಲು ಸಾಧ್ಯ.
ಉಪಳೇಶ್ವರ ಪ್ರಕರಣದಲ್ಲಿಯೂ ಇದೇ ಕಾರಣಕ್ಕೆ ಈಗ ಬಂಧಿತರಾದ ಇಬ್ಬರ ತನಿಖೆಯಷ್ಟೇ ಮುಖ್ಯವಲ್ಲ, ವಶಪಡಿಸಿಕೊಂಡಿರುವ ವನ್ಯಜೀವಿ ಉತ್ಪನ್ನಗಳ ಮೂಲವನ್ನು ಪತ್ತೆಹಚ್ಚುವುದೂ ಮುಖ್ಯ. ಇಷ್ಟೊಂದು ಪ್ರಮಾಣದ ಪ್ಯಾಂಗೋಲಿನ್ ಚಿಪ್ಪುಗಳು ಎಲ್ಲಿಂದ ಬಂದವು? ಹುಲಿ ಮತ್ತು ಚಿರತೆಯ ಅಂಗಾಂಗಗಳು ಯಾವ ಪ್ರದೇಶದಿಂದ ಸಂಗ್ರಹಿಸಲ್ಪಟ್ಟವು? ಇವುಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ಉದ್ದೇಶಿಸಲಾಗಿತ್ತೇ ಅಥವಾ ಮಲೆನಾಡಿನಿಂದ ಹೊರಗೆ ಸಾಗಿಸಲು ತಯಾರಿ ನಡೆದಿತ್ತೇ? ಇದರ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ? ಇಂತಹ ಪ್ರಶ್ನೆಗಳಿಗೆ ತನಿಖೆಯಲ್ಲಿ ಉತ್ತರ ಸಿಗಬೇಕಿದೆ.
ಇಲ್ಲಿ ಬದುಕುತ್ತಿರುವ ಪ್ರತಿಯೊಂದು ವನ್ಯಜೀವಿಯೂ ಪರಿಸರ ವ್ಯವಸ್ಥೆಯ ಒಂದು ಭಾಗ. ಒಂದು ಪ್ರಾಣಿಯನ್ನು ಬೇಟೆಯಾಡಿ ಅದರ ಅಂಗಾಂಗಗಳನ್ನು ಮಾರಾಟ ಮಾಡುವುದರ ಹಿಂದೆ ಕೇವಲ ಒಬ್ಬ ಬೇಟೆಗಾರನ ಕೃತ್ಯವಿರುವುದಿಲ್ಲ. ಅದರ ಹಿಂದೆ ಬೇಡಿಕೆ, ಹಣ ಮತ್ತು ಸಾಗಾಟದ ಸರಪಳಿಯೂ ಇರುತ್ತದೆ, ಸ್ಥಳೀಯ ಪ್ರಭಾವಿಗಳ ಕೈಜೋಡಿಸುವಿಕೆಯನ್ನೂ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ಕೊನೆಯ ಹಂತದ ಆರೋಪಿಯನ್ನು ಬಂಧಿಸುವುದಕ್ಕಿಂತ, ಆ ಸರಪಳಿಯ ಆರಂಭ ಮತ್ತು ಅಂತ್ಯವನ್ನು ಪತ್ತೆಹಚ್ಚುವುದು ಅರಣ್ಯ ಇಲಾಖೆಯ ಮುಂದಿರುವ ನಿಜವಾದ ಸವಾಲು.
ಹೀಗಾಗಿ ಉಪಳೇಶ್ವರದಲ್ಲಿ ಅರಣ್ಯ ಸಂಚಾರಿ ದಳ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದರೂ, ಈ ಪ್ರಕರಣ ಅಲ್ಲಿಗೇ ಮುಗಿಯಬಾರದು. ಸ್ಥಳೀಯ ಮಟ್ಟದಲ್ಲಿ ಇಂತಹ ಅಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ, FMS ಮತ್ತು ಸ್ಥಳೀಯ ಅರಣ್ಯ ಸಿಬ್ಬಂದಿಯ ನಡುವೆ ಸಮನ್ವಯ ಹೇಗಿದೆ ಹಾಗೂ ಮಲೆನಾಡಿನ ಅರಣ್ಯ ಪ್ರದೇಶಗಳಲ್ಲಿ ನಡೆಯಬಹುದಾದ ವನ್ಯಜೀವಿ ಕಳ್ಳಸಾಗಣೆ ಜಾಲದ ಮೇಲೆ ಎಷ್ಟು ನಿಗಾ ಇದೆ ಎಂಬುದಕ್ಕೂ ಈ ಪ್ರಕರಣ ಉತ್ತರ ಹುಡುಕಬೇಕಾಗಿದೆ.