ಕಾರವಾರ: ಗಣೇಶ ಹಬ್ಬಕ್ಕೆ ಇನ್ನೇನು ಒಂದೇ ದಿನ ಬಾಕಿ. ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆಯುತ್ತಿದ್ದರೆ, ಇತ್ತ ಮಣ್ಣಿನ ಗಣಪತಿ ವಿಗ್ರಹಗಳನ್ನು ರೂಪಿಸಿರುವ ಕಲಾವಿದರು ಅವುಗಳಿಗೆ ಬಣ್ಣದ ಚಿತ್ತಾರ ಮೂಡಿಸಿ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಕಾರವಾರ ತಾಲೂಕಿನ ಕಡವಾಡ ಗ್ರಾಮದ ತಂದೆ-ಮಗನ ಜೋಡಿ ಹಲವು ವರ್ಷಗಳಿಂದ ಮಣ್ಣಿನ ಗಣಪತಿ ವಿಗ್ರಹಗಳನ್ನು ತಯಾರಿಸುವ ಮೂಲಕ ಗಮನ ಸೆಳೆಯುತ್ತಿದೆ.
ಕಡವಾಡ ಗ್ರಾಮದ ಗಣಪತಿ ಬಾಬನಿ ಮಾಂಜ್ರೇಕರ ಹಾಗೂ ಅವರ ಪುತ್ರ ರಜತ ಮಾಂಜ್ರೇಕರ ವಿವಿಧ ಕಲಾಕೃತಿಗಳಲ್ಲಿ ಮಣ್ಣಿನ ಗಣಪತಿ ವಿಗ್ರಹಗಳನ್ನು ನಿರ್ಮಿಸುತ್ತಿದ್ದಾರೆ. ಗಣಪತಿ ಮಾಂಜ್ರೇಕರ ಅವರು ಹಲವು ವರ್ಷಗಳಿಂದ ವಿಗ್ರಹ ತಯಾರಿಕೆಯ ಕಾಯಕದಲ್ಲಿ ತೊಡಗಿದ್ದು, ತಮ್ಮ ಮಗ ರಜತ ಅವರು ಕೇವಲ 9ನೇ ವಯಸ್ಸಿನಲ್ಲಿದ್ದಾಗಲೇ ಈ ಕಲೆಯನ್ನು ಅವರಿಗೆ ಪರಿಚಯಿಸಿದ್ದರು. ತಂದೆಯಿಂದ ಕಲಿತ ಕಲೆಯನ್ನು ಮುಂದುವರಿಸಿಕೊಂಡು ಬಂದಿರುವ ರಜತ ಇದೀಗ ತಂದೆಯೊಂದಿಗೆ ಸೇರಿ ಸುಂದರ ಗಣಪತಿ ವಿಗ್ರಹಗಳನ್ನು ರೂಪಿಸುತ್ತಿದ್ದಾರೆ.
ಇವರು ತಯಾರಿಸುವ ಮಣ್ಣಿನ ಗಣಪತಿ ವಿಗ್ರಹಗಳಿಗೆ ಕಾರವಾರ ತಾಲೂಕಿನಲ್ಲಷ್ಟೇ ಅಲ್ಲದೆ ನೆರೆಯ ಗೋವಾ ರಾಜ್ಯದಲ್ಲಿಯೂ ಬೇಡಿಕೆ ಇದೆ. ಈ ಬಾರಿ ತಯಾರಿಸಿರುವ ವಿಗ್ರಹಗಳ ಪೈಕಿ ಐದು ವಿಗ್ರಹಗಳು ಗೋವಾ ರಾಜ್ಯಕ್ಕೆ ತೆರಳಿವೆ. ವರ್ಷದಿಂದ ವರ್ಷಕ್ಕೆ ತಮ್ಮಲ್ಲಿ ಮಣ್ಣಿನ ಗಣಪತಿ ವಿಗ್ರಹ ತಯಾರಿಕೆಯ ಪ್ರಮಾಣ ಹೆಚ್ಚುತ್ತಿದೆ ಎಂದು ಕಲಾವಿದರು ಹೇಳುತ್ತಾರೆ. ಈ ಬಾರಿ ಒಟ್ಟು 30 ವಿಗ್ರಹಗಳನ್ನು ತಯಾರಿಸಿದ್ದಾರೆ.
ಆದರೆ ಮಣ್ಣಿನ ಗಣಪತಿ ವಿಗ್ರಹ ತಯಾರಿಸುವ ಕಲಾವಿದರ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿರುವುದು ಮತ್ತೊಂದು ಚಿಂತೆಯಾಗಿದೆ. ವಿಗ್ರಹ ತಯಾರಿಕೆಗೆ ಬೇಕಾದ ಮಣ್ಣು, ಬಣ್ಣ ಸೇರಿದಂತೆ ವಿವಿಧ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿದ್ದು, ಈಗಿನ ದುಬಾರಿ ದಿನಗಳಲ್ಲಿ ಒಂದು ವಿಗ್ರಹವನ್ನು ನಿರ್ಮಿಸಿ ಗ್ರಾಹಕರ ಮನೆ ತಲುಪಿಸುವವರೆಗೆ ಕಲಾವಿದರಿಗೆ ಸಾಕಷ್ಟು ಖರ್ಚಾಗುತ್ತದೆ. ಹೀಗಾಗಿ ಸಾಂಪ್ರದಾಯಿಕ ಮಣ್ಣಿನ ಗಣಪತಿ ವಿಗ್ರಹ ತಯಾರಿಕೆಯ ಕಲೆ ಉಳಿಯಬೇಕಾದರೆ ಸರ್ಕಾರ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂಬುದು ಅವರ ಆಶಯ.
ಕಲಾವಿದರಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಕಲಾವಿದರ ಮಾಶಾಸನದಂತಹ ಸೌಲಭ್ಯಗಳನ್ನು ಕಲ್ಪಿಸಿ ಈ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಹಬ್ಬದ ಸಂಭ್ರಮದ ನಡುವೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಗೆ ಬೇಡಿಕೆ ಹೆಚ್ಚುತ್ತಿರುವುದು ಸಂತಸದ ಸಂಗತಿಯಾದರೂ, ಆ ವಿಗ್ರಹಗಳ ಹಿಂದೆ ಇರುವ ಕಲಾವಿದರ ಪರಿಶ್ರಮ ಮತ್ತು ಬದುಕಿಗೂ ಸಮಾಜದ ಗಮನ ಸಿಗಬೇಕಿದೆ.