ಕುಮಟಾ: ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯೊಂದು ಏಕಾಏಕಿ ಚಲಿಸಿ ಎಳನೀರು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಗುರುವಾರ ಬೆಳಗ್ಗೆ ಕುಮಟಾ ಪಟ್ಟಣದ ಎಪಿಎಂಸಿ ಬಳಿ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮೃತರನ್ನು ಉಮೇಶ್ ಹಲಮನಕರ್ ಎಂದು ಗುರುತಿಸಲಾಗಿದೆ ಎನ್ನಲಾಗಿದೆ. ಅವರು ಎಪಿಎಂಸಿ ಸಮೀಪ ಹೆದ್ದಾರಿ ಬದಿಯಲ್ಲಿ ಎಳೆನೀರು ಮಾರಾಟ ಮಾಡುತ್ತಿದ್ದ ವೇಳೆ ನಿಲ್ಲಿಸಿದ್ದ ಲಾರಿ ಏಕಾಏಕಿ ಚಲಿಸಿ ಅವರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.
ಲಾರಿ ಚಾಲಕ ವಾಹನವನ್ನು ನಿಲ್ಲಿಸಿ ಚಿಕನ್ ಖರೀದಿಸಲು ತೆರಳಿದ್ದ ಎನ್ನಲಾಗುತ್ತಿದ್ದು, ಈ ಸಂದರ್ಭದಲ್ಲಿ ಲಾರಿ ತಾನಾಗಿಯೇ ಚಲಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಲಾರಿ ಎಳೆನೀರು ವ್ಯಾಪಾರಿ ಮೇಲೆ ಹರಿದ ಬಳಿಕ, ಸಮೀಪದಲ್ಲೇ ಹಣ್ಣು ವ್ಯಾಪಾರ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಗೂ ಡಿಕ್ಕಿಯಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ಲಾರಿ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದುಬಂದಿದೆ. ಕುಮಟಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.