Ad
Home Uncategorized ಗಣಪತಿ ವಿಸರ್ಜನೆ: ಮೆರವಣಿಗೆಯ ರಥಕ್ಕೆ ಶಾಸಕರೇ ಸಾರಥಿ!

ಗಣಪತಿ ವಿಸರ್ಜನೆ: ಮೆರವಣಿಗೆಯ ರಥಕ್ಕೆ ಶಾಸಕರೇ ಸಾರಥಿ!

0
5

ಟ್ರ್ಯಾಕ್ಟರ್ ಚಲಾಯಿಸಿ ಮೆರವಣಿಗೆಗೆ ಮೆರಗು ನೀಡಿದ ಶಾಸಕ ಭೀಮಣ್ಣ ನಾಯ್ಕ

ಶಿರಸಿ: ಗಣಪತಿ ವಿಸರ್ಜನಾ ಮೆರವಣಿಗೆ ಎಂದರೆ ಭಕ್ತರ ಸಂಭ್ರಮ, ಮಂಗಳವಾದ್ಯಗಳ ಸದ್ದು, ಕುಣಿತ-ಜೈಕಾರಗಳ ನಡುವೆ ಸಾಗುವ ಉತ್ಸವ. ಆದರೆ ಶಿರಸಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರೇ ಟ್ರ್ಯಾಕ್ಟರ್‌ನ ಸ್ಟೇರಿಂಗ್ ಹಿಡಿದು ಸಾಗಿದ್ದು ವಿಶೇಷ ಗಮನ ಸೆಳೆಯಿತು.

ಶಿರಸಿಯ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣಪತಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಾಸಕ ಭೀಮಣ್ಣ ನಾಯ್ಕ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕರ್ತರೊಂದಿಗೆ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದರು.

ಗಣೇಶ ಮೂರ್ತಿ ಹೊತ್ತಿದ್ದ ಟ್ರ್ಯಾಕ್ಟರ್ ಅನ್ನು ಶಾಸಕರೇ ಸ್ವತಃ ಚಲಾಯಿಸುವ ಮೂಲಕ ಮೆರವಣಿಗೆಗೆ ಮೆರಗು ನೀಡಿದರು. ಈ ವೇಳೆ ಅವರ ಸುತ್ತಲೂ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾದ್ಯಗಳೊಂದಿಗೆ ನೃತ್ಯ ಮಾಡಿ, ಜೈಕಾರ ಕೂಗುತ್ತಾ ಸಂಭ್ರಮಿಸಿದರು. ಶಾಸಕರು ಟ್ರ್ಯಾಕ್ಟರ್ ಚಲಾಯಿಸುತ್ತಿರುವ ದೃಶ್ಯ ಮೆರವಣಿಗೆಯಲ್ಲಿ ನೆರೆದಿದ್ದವರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭೀಮಣ್ಣ ನಾಯ್ಕ, ದೇವರ ಸೇವೆಯಲ್ಲಿ ಹಾಗೂ ಕಾರ್ಯಕರ್ತರ ಸಂಭ್ರಮದಲ್ಲಿ ಭಾಗಿಯಾಗುವುದು ಸಂತಸ ನೀಡುತ್ತದೆ. ವಿಘ್ನನಿವಾರಕ ಶ್ರೀ ಗಣಪತಿ ಜಿಲ್ಲೆಯ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಪ್ರಮುಖ ನಾಯಕರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!