ಶಿರಸಿ: ಕಸ್ತೂರಿ ರಂಗನ್ ವರದಿ ಉತ್ತರ ಕನ್ನಡ ಜಿಲ್ಲೆಯ ಜನರ ಬದುಕನ್ನು ಸಂಪೂರ್ಣ ನಾಶದತ್ತ ಕೊಂಡೊಯ್ಯುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಈಗಾಗಲೇ ಆರು ಬಾರಿ ವರದಿಯನ್ನು ತಿರಸ್ಕರಿಸಿದೆ. ಇದೀಗ ಏಳನೇ ಬಾರಿಗೆ ಕೇಂದ್ರ ಸರ್ಕಾರ ವರದಿ ಅನುಷ್ಠಾನಕ್ಕೆ ಒತ್ತಾಯಿಸುತ್ತಿದೆ. ಜಿಲ್ಲೆಯ ಜನರ ತಲೆ ಮೇಲೆ ಮತ್ತೆ ಮತ್ತೆ ವರದಿಯನ್ನು ಹೇರಬೇಕಾದ ಅಗತ್ಯವೇನಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಪ್ರಶ್ನಿಸಿದ್ದಾರೆ.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯನ್ನು ಯಾರು ಸಿದ್ಧಪಡಿಸಿದ್ದಾರೆ ಎಂಬುದು ಮುಖ್ಯವಲ್ಲ. ವರದಿ ಅನುಷ್ಠಾನದಿಂದ ಆಗುವ ಸಾಧಕ-ಬಾಧಕಗಳ ಕುರಿತು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಜನಸಾಮಾನ್ಯರೊಂದಿಗೆ ಚರ್ಚಿಸಬೇಕು. ಆದರೆ ಅಂತಹ ಯಾವುದೇ ಪ್ರಕ್ರಿಯೆ ಇಲ್ಲದೆ ಏಳನೇ ಬಾರಿಗೆ ವರದಿಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಎಲ್ಲ ಪಕ್ಷಗಳ ಶಾಸಕರು ಪಕ್ಷಾತೀತವಾಗಿ ಒಟ್ಟಾಗಿ ನಿಲುವು ಮಂಡಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಕಳುಹಿಸುವುದಾಗಿ ಹೆಬ್ಬಾರ ತಿಳಿಸಿದರು.
ಜಿಲ್ಲೆಯ ಪರಿಸರ ರಕ್ಷಣೆಯ ವಿಚಾರದಲ್ಲೂ ತಮ್ಮ ನಿಲುವು ಸ್ಪಷ್ಟವಾಗಿದೆ ಎಂದ ಅವರು, ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಶೇ.86ರಷ್ಟು ಅರಣ್ಯವನ್ನು ಉಳಿಸಿಕೊಂಡು ಬಂದಿದೆ. ಪರಿಸರ ಸಂರಕ್ಷಣೆಯ ಪಾಠವನ್ನು ಜಿಲ್ಲೆಗೆ ಪ್ರತ್ಯೇಕವಾಗಿ ಕಲಿಸುವ ಅಗತ್ಯವಿಲ್ಲ. ಸರ್ವಾನುಮತದಿಂದ ಸಚಿವ ಸಂಪುಟದಲ್ಲಿ ವರದಿಯನ್ನು ತಿರಸ್ಕರಿಸಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವರು ಈ ಕುರಿತು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ನದಿ ಜೋಡಣೆ ಯೋಜನೆ ಕೇವಲ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯೋಜನೆಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ಇದರಲ್ಲಿ ಜವಾಬ್ದಾರಿ ಇದೆ. ಯೋಜನೆಯನ್ನು ಕೈಬಿಡುವಂತೆ ಎರಡೂ ಸರ್ಕಾರಗಳಿಗೆ ಮನವಿ ಮಾಡಿದ್ದು, ಹಲವು ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಈ ಕುರಿತು ವಿನಂತಿಸಲಾಗಿದೆ ಎಂದರು.
ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನದಿ ಜೋಡಣೆ ವಿರೋಧಿ ಹೋರಾಟಕ್ಕೆ ತಾವು ಧುಮುಕಿದ್ದು, ಈ ಹೋರಾಟಕ್ಕೆ ಯಾವುದೇ ರಾಜಕೀಯ ಲೇಪನ ನೀಡದೆ ಶ್ರೀಗಳ ನಿರ್ದೇಶನವನ್ನು ಪಾಲಿಸಲು ಸಿದ್ಧರಿರುವುದಾಗಿ ಹೆಬ್ಬಾರ ಹೇಳಿದರು.
ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆಯಿಂದ ಜಿಲ್ಲೆಯ ಅರಣ್ಯವಾಸಿಗಳು ಹಾಗೂ ಗಾಂವಠಾಣ ಜಾಗದಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ತಾವು ಹಾಗೂ ಶಾಸಕ ಭೀಮಣ್ಣ ನಾಯ್ಕ ಅವರು ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಸೆ.21ರಿಂದ ನಡೆಯುವ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಸಭೆ ಕರೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಸರ್ಕಾರ ಜಿಲ್ಲೆಯ ಜನರ ಭಾವನೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.