ರಾಮನಗರ: ಟ್ರಾಫಿಕ್ ದಂಡ ಪಾವತಿಸುವಂತೆ ನಕಲಿ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ, ಲಿಂಕ್ ಮೂಲಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಸಿದ ಬಳಿಕ ಆಂಬ್ಯುಲೆನ್ಸ್ ಚಾಲಕನ ಮೂರು ಕ್ರೆಡಿಟ್ ಕಾರ್ಡ್ಗಳಿಂದ ಒಟ್ಟು 2,19,855 ರೂ ಹಣ ವರ್ಗಾಯಿಸಿಕೊಂಡಿರುವ ಪ್ರಕರಣ ರಾಮನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಜೋಯಿಡಾ ತಾಲೂಕಿನ ರಾಮನಗರದ ಜೆಡ್ಪಿ ಕ್ವಾರ್ಟರ್ಸ್ನಲ್ಲಿ ವಾಸವಾಗಿರುವ 39 ವರ್ಷದ ಚಾಲಕನಿಗೆ ಸೆ.11ರಂದು ತಾನು ಚಲಾಯಿಸುತ್ತಿದ್ದ ಕೆಎ-51/ಜಿ-0493 ಸಂಖ್ಯೆಯ ಆಂಬ್ಯುಲೆನ್ಸ್ಗೆ ಟ್ರಾಫಿಕ್ ವೈಲೇಶನ್ ಆಗಿದೆ ಎಂದು ತಿಳಿಸುವ ವಾಟ್ಸ್ಆ್ಯಪ್ ಸಂದೇಶ ಬಂದಿತ್ತು. ಆಂಬ್ಯುಲೆನ್ಸ್ ಮೇಲ್ವಿಚಾರಕರಿಗೆ ಬಂದಿದ್ದ ಸಂದೇಶವನ್ನು ಅವರು ಚಾಲಕನಿಗೆ ಫಾರ್ವರ್ಡ್ ಮಾಡಿದ್ದರು.
ಸಂದೇಶದಲ್ಲಿದ್ದ ಲಿಂಕ್ ಮೂಲಕ ದಂಡ ಪಾವತಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಚಾಲಕ ಲಿಂಕ್ ಕ್ಲಿಕ್ ಮಾಡಿದಾಗ ಕ್ರೋಮ್ ಬ್ರೌಸರ್ನಲ್ಲಿ ಮತ್ತೊಂದು ವೆಬ್ಪುಟ ತೆರೆದುಕೊಂಡಿದ್ದು, ಅದರ ಮೂಲಕ ‘Next Parivahan’ ಹೆಸರಿನ ಅಪ್ಲಿಕೇಶನ್ ಡೌನ್ಲೋಡ್ ಆಗಿದೆ. ಅಪ್ಲಿಕೇಶನ್ ತೆರೆದಾಗ ಯಾವುದೇ ಮಾಹಿತಿ ಕಾಣಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಚಾಲಕ, ಅದೇ ದಿನ ಬೆಳಗಾವಿಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ್ದಾರೆ.
ಆಂಬ್ಯುಲೆನ್ಸ್ ವಿರುದ್ಧ ಯಾವುದೇ ಟ್ರಾಫಿಕ್ ವೈಲೇಶನ್ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ ಬಳಿಕ ಇದು ಸೈಬರ್ ವಂಚಕರು ಕಳುಹಿಸಿರುವ ನಕಲಿ ಲಿಂಕ್ ಆಗಿರಬಹುದು ಎಂಬ ಅನುಮಾನ ಚಾಲಕನಿಗೆ ಬಂದಿದೆ. ಕೂಡಲೇ ಮೊಬೈಲ್ನಲ್ಲಿದ್ದ ಅಪ್ಲಿಕೇಶನ್ನ್ನು ಅನ್ಇನ್ಸ್ಟಾಲ್ ಮಾಡಿದ್ದಾರೆ.
ಆದರೆ, ಎರಡು ದಿನಗಳ ಬಳಿಕ ವಂಚನೆಯ ಬಲೆಗೆ ಸಿಲುಕಿರುವುದು ಬೆಳಕಿಗೆ ಬಂದಿದೆ. ಸೆ.14ರಂದು ಸಂಜೆಯಿಂದ ಒಟ್ಟೂ ಮೂರು ಕ್ರೆಡಿಟ್ ಕಾರ್ಡ್ಗಳಿಂದ ಒಟ್ಟು 2,19,855 ರೂ ಹಣ ವಂಚನೆಯಾಗಿರುವುದು ಗೊತ್ತಾಗಿದೆ.
ಕೂಡಲೇ ಚಾಲಕ ಮೂರು ಕ್ರೆಡಿಟ್ ಕಾರ್ಡ್ಗಳ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಆನ್ಲೈನ್ ವಂಚನೆಯ ಕುರಿತು ಮಾಹಿತಿ ನೀಡಿ ಕಾರ್ಡ್ಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಅಲ್ಲದೆ 1930 ಸೈಬರ್ ಕ್ರೈಂ ಹೆಲ್ಪ್ಲೈನ್ಗೆ ಕರೆ ಮಾಡಿ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳಿಂದ ನಡೆದ ವಂಚನೆಯ ಕುರಿತು ದೂರು ನೀಡಿದ್ದಾರೆ. ಸೆ.15ರಂದು ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ನಡೆದ ವಂಚನೆಯ ಬಗ್ಗೆಯೂ ವರದಿ ಮಾಡಿದ್ದಾರೆ.
ಟ್ರಾಫಿಕ್ ದಂಡದ ಹೆಸರಿನಲ್ಲಿ ಬಂದ ನಕಲಿ ಲಿಂಕ್ನ್ನು ಕ್ಲಿಕ್ ಮಾಡಿದ ಬಳಿಕ ಕ್ರೆಡಿಟ್ ಕಾರ್ಡ್ಗಳಿಂದ ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ವಂಚನೆಗೆ ಬಳಸಿದ ಲಿಂಕ್ ಹಾಗೂ ಹಣ ವರ್ಗಾವಣೆಯಾದ ಖಾತೆಗಳ ಕುರಿತು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.