Sunday, September 20, 2026
Join WhatsApp Group
HomeLocal Newsಬನವಾಸಿಯಲ್ಲಿ ಆಸ್ತಿ ದಾಖಲೆ, ರಸ್ತೆ ಸಮಸ್ಯೆ: ಸೆ.21ರಿಂದ ಬಿಜೆಪಿ ಯುವಮೋರ್ಚಾ ಪ್ರತಿಭಟನೆ

ಬನವಾಸಿಯಲ್ಲಿ ಆಸ್ತಿ ದಾಖಲೆ, ರಸ್ತೆ ಸಮಸ್ಯೆ: ಸೆ.21ರಿಂದ ಬಿಜೆಪಿ ಯುವಮೋರ್ಚಾ ಪ್ರತಿಭಟನೆ

ಬನವಾಸಿ: ವರ್ಷಗಳಿಂದ ಗ್ರಾಮ ಪಂಚಾಯಿತಿಯಿಂದ ಮನೆ ನಂಬರ್ ಪಡೆದು, ಆಸ್ತಿ ತೆರಿಗೆ ಪಾವತಿಸುತ್ತಾ ಬಂದಿರುವ ಕುಟುಂಬಗಳ ಆಸ್ತಿ ದಾಖಲೆಗಳೇ ಈಗ ಅತಂತ್ರವಾಗುವ ಆತಂಕ ಎದುರಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಸೆ.21ರಿಂದ 26ರವರೆಗೆ ಬನವಾಸಿ ಭಾಗದ ವಿವಿಧ ಗ್ರಾಮ ಪಂಚಾಯಿತಿಗಳ ಎದುರು ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ್ ಕೆ. ನಾಯ್ಕ ತಿಳಿಸಿದ್ದಾರೆ.

2025ರ ಅಧಿಕೃತ ಮಾರ್ಗಸೂಚಿಯ ಅನ್ವಯ ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿನ ಅತಿಕ್ರಮಣಕ್ಕೆ ಸಂಬಂಧಿಸಿದ ಆಸ್ತಿಗಳನ್ನು ತಂತ್ರಾಂಶದಿಂದ ಕೈಬಿಟ್ಟು, ಅಂತಹ ಆಸ್ತಿಗಳಿಗೆ ತೆರಿಗೆ ಪಡೆಯಬಾರದು ಎಂಬ ನಿಯಮ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಪಂಚಾಯಿತಿ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡು ಬದುಕುತ್ತಿರುವ ಕುಟುಂಬಗಳಲ್ಲಿ ಆತಂಕ ಮೂಡಿದೆ ಎಂದು ಅವರು ಹೇಳಿದ್ದಾರೆ.

ಪಂಚಾಯಿತಿಯಿಂದ ಮನೆ ನಂಬರ್, ಆಸ್ತಿ ದಾಖಲೆ ಹಾಗೂ ತೆರಿಗೆ ಪಾವತಿ ದಾಖಲೆಗಳನ್ನು ಹೊಂದಿರುವ ಕುಟುಂಬಗಳ ಮುಂದಿನ ಸ್ಥಿತಿ ಏನು ಎಂಬುದರ ಕುರಿತು ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕು. ಹಲವು ವರ್ಷಗಳಿಂದ ದಾಖಲೆಗಳನ್ನು ಹೊಂದಿರುವ ಜನರಿಗೆ ಅನ್ಯಾಯವಾಗದಂತೆ ಕಾನೂನುಬದ್ಧ ಪರಿಹಾರ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜನರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯಸಮ್ಮತ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ಸೆ.21ರಂದು ಬನವಾಸಿ ಮಂಡಲದ ಅಧ್ಯಕ್ಷ ರಮೇಶ ನಾಯ್ಕ ಹಾಗೂ ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರೇಮಕುಮಾರ್ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆಗೆ ಚಾಲನೆ ದೊರೆಯಲಿದ್ದು, ಸೆ.21ರಿಂದ 26ರವರೆಗೆ ಬನವಾಸಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳ ಎದುರು ಹಂತ ಹಂತವಾಗಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಬನವಾಸಿ ಭಾಗದ ಪ್ರಮುಖ ರಸ್ತೆ ಸಮಸ್ಯೆಯನ್ನೂ ಪ್ರತಿಭಟನೆಯಲ್ಲಿ ಪ್ರಸ್ತಾಪಿಸಲಾಗುವುದು. ಗುಡ್ನಾಪುರ ಬಸ್ ನಿಲ್ದಾಣದಿಂದ ಕಂತ್ರಾಜಿ ಗ್ರಾಮದವರೆಗಿನ ರಸ್ತೆ ಹಾಗೂ ಗುಡ್ನಾಪುರ ಕ್ರಾಸ್‌ನಿಂದ ಮಧುರವಳ್ಳಿ ಬಸ್ ನಿಲ್ದಾಣದವರೆಗಿನ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ಅಪಾಯಕಾರಿ ಗುಂಡಿಗಳಿಂದ ಕೂಡಿವೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುವುದು.

ಜನರ ಮೂಲಭೂತ ಸಮಸ್ಯೆಗಳ ಕುರಿತು ಧ್ವನಿ ಎತ್ತಿ, ಅವುಗಳಿಗೆ ಪರಿಹಾರ ದೊರಕಿಸಲು ಪ್ರಯತ್ನಿಸುವುದು ಸಾರ್ವಜನಿಕ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪ್ರೇಮಕುಮಾರ್ ನಾಯ್ಕ ಕರೆ ನೀಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share