ಯಲ್ಲಾಪುರ: ಸರಕಾರಿ ಭೂಮಿಯಲ್ಲಿರುವ ಕಟ್ಟಡಗಳು ಹಾಗೂ ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಸೆ.21ರಿಂದ 28ರವರೆಗೆ ಮಲವಳ್ಳಿ, ವಜ್ರಳ್ಳಿ, ಆನಗೋಡ, ದೇಹಳ್ಳಿ ಸೇರಿದಂತೆ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಜನಾಗ್ರಹ ಆಂದೋಲನ ಹಾಗೂ ಧರಣಿ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಅವರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಬಡವರಿಗೆ ಒಂದೇ ಒಂದು ಮನೆ ಕಟ್ಟಿಸಿಕೊಡಲು ಸಾಧ್ಯವಾಗದಿದ್ದರೂ, ಅತಿಕ್ರಮಣ ಮನೆಗಳ ನಂಬರ್ ರದ್ದು ಮಾಡಬೇಕು ಎಂಬ ಆದೇಶ ನೀಡಿದೆ. ಸರ್ಕಾರದ ಈ ಆದೇಶ ಬಡಜನರ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರಿಂದ ಹೇಗೆ ಲೂಟಿ ಮಾಡಬಹುದು ಎಂದು ಯೋಚಿಸುವ ಜನವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಶೇ.20ರಷ್ಟು ಮಳೆ ಕೊರತೆಯಿದ್ದರೂ ಸರ್ಕಾರ ಮೊದಲು ಕೇವಲ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಬಿಜೆಪಿ ಹೋರಾಟದ ನಂತರ ಪಟ್ಟಿ ಪರಿಷ್ಕರಿಸಿ 25-30 ತಾಲೂಕುಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇನ್ನು 75-80 ತಾಲೂಕುಗಳನ್ನು ಬಿಟ್ಟಿದ್ದಾರೆ. ಈ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರಕ್ಕೆ ಅರಿವು ಮೂಡಿಸಲಾಗುವುದು ಎಂದರು.
ಇದರ ವಿರುದ್ಧ ಸೆ.21ರಿಂದ ಮೂರು ಹಂತದ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಪಂಚಾಯಿತಿ ಮಟ್ಟದಲ್ಲಿ ಸಂತ್ರಸ್ತ ಜನರ ಜೊತೆಗೆ ಪಂಚಾಯಿತಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು. ನಂತರ ಸೆ.29ರಂದು ಯಲ್ಲಾಪುರದಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುವುದು. ಮುಂದಿನ ಹಂತದಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿಯೂ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಹೋರಾಟ ಸಮಿತಿ ಸಂಚಾಲಕರಾದ ಉಮೇಶ ಭಾಗ್ವತ, ಸೋಮೇಶ್ವರ ನಾಯ್ಕ ಉಪಸ್ಥಿತರಿದ್ದರು.