Sunday, September 20, 2026
Join WhatsApp Group
HomeLocal Newsಹೆಬ್ಬಾವಿನ ಮರಿಗೂ ಸಿಕ್ಕಿತು ಸುರಕ್ಷಿತ ತಾಣ!

ಹೆಬ್ಬಾವಿನ ಮರಿಗೂ ಸಿಕ್ಕಿತು ಸುರಕ್ಷಿತ ತಾಣ!

ಮುಂಡಗೋಡ: ಹಾವು ಎಂದರೆ ಸಾಕು, ಹಲವರು ಗಾಬರಿಯಾಗಿ ದೂರ ಸರಿಯುತ್ತಾರೆ. ಆದರೆ ಹಾವುಗಳ ರಕ್ಷಣೆಯನ್ನೇ ತಮ್ಮ ಸೇವೆಯನ್ನಾಗಿ ಮಾಡಿಕೊಂಡಿರುವ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರಿಗೆ ಇಂತಹ ಕರೆಗಳು ಹೊಸದಲ್ಲ. ಇದುವರೆಗೆ ಸಾವಿರಾರು ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿರುವ ಅವರು, ಇದೀಗ ಭದ್ರಾಪುರ ಗ್ರಾಮದಲ್ಲಿ ಮನೆಯೊಂದರ ಮುಂದೆ ಕಾಣಿಸಿಕೊಂಡಿದ್ದ ಹೆಬ್ಬಾವಿನ ಮರಿಯೊಂದನ್ನೂ ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಸೆ.18ರಂದು ರಾತ್ರಿ 7.50ರ ಸುಮಾರಿಗೆ ಮುಂಡಗೋಡ ತಾಲೂಕಿನ ಕಾತೂರ ವಲಯದ ಭದ್ರಾಪುರ ಶಾಖೆಯ ವ್ಯಾಪ್ತಿಯ ಭದ್ರಾಪುರ ಗ್ರಾಮದ ಬಸನ ಗೌಡ್ರು ಅವರ ಮನೆಯ ಮುಂದೆ ಹಾವು ಕಾಣಿಸಿಕೊಂಡಿತ್ತು. ಹಾವು ಕಂಡು ಗಾಬರಿಯಾದ ಬಸನ ಗೌಡ್ರು ಅವರು ಉರಗ ರಕ್ಷಕರಾದ ಪಾಳ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಸುನೀಲ್ ಹೊನ್ನಾವರ ಅವರು ಹಾವು ಇದ್ದ ಸ್ಥಳವನ್ನು ಪರಿಶೀಲಿಸಿದಾಗ ಅದು ಕೊಳಕು ಮಂಡಲ ಹಾವಲ್ಲ, ಹೆಬ್ಬಾವಿನ ಮರಿ ಎಂಬುದು ತಿಳಿದುಬಂದಿದೆ. ತಕ್ಷಣವೇ ಅದನ್ನು ಸುರಕ್ಷಿತವಾಗಿ ಹಿಡಿದು, ರಕ್ಷಣೆಗಾಗಿ ಸಮೀಪದ ಕಾಡಿನಲ್ಲಿ ಬಿಡಲಾಯಿತು.

ಹಾವುಗಳನ್ನು ರಕ್ಷಿಸುವುದಷ್ಟೇ ಅಲ್ಲ, ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸಕ್ಕೂ ಸುನೀಲ್ ಹೊನ್ನಾವರ ಒತ್ತು ನೀಡಿದರು. ಹೆಬ್ಬಾವಿನ ಮರಿಯನ್ನು ಕೈಯಲ್ಲಿ ಹಿಡಿದು ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರಿಗೆ ತೋರಿಸಿ, ಹಾವುಗಳ ಸ್ವಭಾವ ಹಾಗೂ ಹೆಬ್ಬಾವಿನ ಗುಣಲಕ್ಷಣಗಳ ಕುರಿತು ವಿವರಿಸಿದರು. ಹಾವುಗಳು ಕಂಡಾಗ ಭಯಭೀತರಾಗಿ ಅವುಗಳಿಗೆ ಹಾನಿ ಮಾಡದೆ, ತಕ್ಷಣ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಸಾವಿರಾರು ಹಾವುಗಳನ್ನು ರಕ್ಷಿಸಿ ಅವುಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಮರಳಿಸಿರುವ ಸುನೀಲ್ ಹೊನ್ನಾವರ ಅವರ ಈ ಕಾರ್ಯಕ್ಕೆ ಭದ್ರಾಪುರದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ, ‘ಭೇಷ್’ ಎಂದು ಗೌರವ ಸೂಚಿಸಿದರು. ಕಾರ್ಯಾಚರಣೆಯಲ್ಲಿ ಮುಸ್ತಫಾ ರಫೀಕ್ ಸಾಬ್, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share